ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶ ಇಲ್ಲದೆಯೂ ಒಳ ಮೀಸಲಾತಿ ಜಾರಿ ಮಾಡಬಹುದು ಎಂದು ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಹೇಳಿದ್ದಾರೆ.
ಅಖಿಲ ಕರ್ನಾಟಕ ಆದಿ ಜಾಂಬವ ಸಂಘದ ವತಿಯಿಂದ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಸಂಘದ 45ನೇ ವಾರ್ಷಿಕೋತ್ಸವ ಲೇಖಕ ಪಿ.ಎಂ. ಚಿಕ್ಕ ವೆಂಕಟಸ್ವಾಮಿ ಮೇಲಗಾಣಿ ಅವರ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋರ್ಟ್ ಆದೇಶ ಇಲ್ಲದೆಯೂ ಒಳ ಮೀಸಲಾತಿ ಜಾರಿ ಮಾಡಬಹುದು. ತಿದ್ದುಪಡಿ ತಂದು ಒಳಮೀಸಲಾತಿ ಕಲ್ಪಿಸುವ ಅವಕಾಶ ಸಂವಿದಾನದಲ್ಲಿದೆ. ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ತೋರಿಸದೆ ಜನರನ್ನು ಮೂರ್ಖರನ್ನಾಗಿಸುತ್ತಿವೆ. ಎದೆಗಾರಿಕೆ ಇದ್ದಲ್ಲಿ ಒಳ ಮೀಸಲಾತಿ ಜಾರಿ ಸಾಧ್ಯವಿದೆ ಎಂದು ಹೇಳಿದ್ದಾರೆ.
ನನಗೆ ಸ್ಥಾನ ಮಾನಕ್ಕಿಂತ ಸಮುದಾಯದ ಬೆಳವಣಿಗೆ ಮುಖ್ಯ. ಹೀಗಾಗಿ ಒಳಮಿಸಲಾತಿ ಜಾರಿ ಬಗ್ಗೆ ಧೈರ್ಯದಿಂದ ಮಾತನಾಡುತ್ತೇನೆ. ಒಳ ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದ್ದು, ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.