ಬೆಂಗಳೂರು: ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಕ್ಯಾಷಿಯರ್ ಕೆಲಸಕ್ಕೆ ಸೇರಿಕೊಂಡು ಹಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಹೋಟೆಲ್ ಮಾಲೀಕರು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬನಶಂಕರಿ ಕತ್ರಿಗುಪ್ಪೆ ನಿವಾಸಿ ಎಂ.ಎಸ್. ರವಿಕುಮಾರ್(66) ಬಂಧಿತ ಆರೋಪಿ. ದೇವನಹಳ್ಳಿ ಸಮೀಪ ನಂದಗೋಕುಲ ಹೋಟೆಲ್ ನಲ್ಲಿ ರವಿಕುಮಾರ್ ಕ್ಯಾಷಿಯರ್ ಕೆಲಸಕ್ಕೆ ಸೇರಿಕೊಂಡಿರುವ ಮಾಹಿತಿ ತಿಳಿದ ಕೆಆರ್ ಪುರ ಭಟ್ಟರಹಳ್ಳಿಯ ನ್ಯೂ ಉಡುಪಿ ಗ್ರ್ಯಾಂಡ್ ಹೋಟೆಲ್ ಮಾಲೀಕ ಸತೀಶ್ ಶೆಟ್ಟಿ ಸ್ಥಳಕ್ಕೆ ಹೋಗಿ ಆರೋಪಿಯನ್ನು ಹಿಡಿದು ಕೆಆರ್ ಪುರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರವಿಕುಮಾರ್ ದೊಡ್ಡ ದೊಡ್ಡ ಹೋಟೆಲ್ ಮಾಲೀಕರ ಬಳಿ ಹೋಗಿ ತನ್ನ ಜಾತಿ ಇಂತಹುದು, ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ವಯಸ್ಸಾಗಿದೆ, ಆರ್ಥಿಕ ಸಂಕಷ್ಟವಿದೆ, ಕೆಲಸ ಕೊಟ್ಟರೆ ನಿಷ್ಠೆಯಿಂದ ಮಾಡುತ್ತೇನೆ ಎಂದು ಗೋಗರೆದು ಕೆಲಸಕ್ಕೆ ಸೇರಿಕೊಳ್ಳುತ್ತಿದ್ದ. ನಂತರ ಮೂರ್ನಾಲ್ಕು ದಿನ ಕೆಲಸ ಮಾಡಿ ಹಣ ದೋಚಿ ಪರಾರಿಯಾಗುತ್ತಿದ್ದ.
ಅನೇಕ ಪ್ರತಿಷ್ಠಿತ ಹೋಟೆಲ್ ಮಾಲೀಕರಿಗೆ ಇದೇ ರೀತಿ ವಂಚಿಸಿರುವುದು ಗೊತ್ತಾಗಿದೆ. ಕಳೆದ ವರ್ಷ ಸತೀಶ್ ಶೆಟ್ಟಿ ಅವರ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿ 3-4 ದಿನ ಕೆಲಸ ಮಾಡಿ ಒಂದು ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದ. ಸತೀಶ್ ಶೆಟ್ಟಿ ಕೆಆರ್ ಪುರ ಠಾಣೆಗೆ ದೂರು ನೀಡಿದ್ದರು. ಹಲವು ಹೋಟೆಲ್ ಗಳಲ್ಲಿ ಇದೇ ರೀತಿ ವಂಚಿಸಿದ್ದಾನೆ. ಭಾನುವಾರ ನಂದಗೋಕುಲ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿದ ಮಾಹಿತಿ ತಿಳಿದು ಸತೀಶ್ ಮತ್ತು ಅವರ ತಂಡದವರು ಸ್ಥಳಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.