ಮಂಗಳೂರು: ಆಶಾಕಿರಣ ಯೋಜನೆಯಡಿ ಉಚಿತವಾಗಿ ಕನ್ನಡಕ ವಿತರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಾಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 8 ಜಿಲ್ಲೆಗಳಲ್ಲಿ ಜನರ ಕಣ್ಣಿನ ತಪಾಸಣೆ ಬಹುತೇಕ ಪೂರ್ಣಗೊಂಡಿದೆ. ದೃಷ್ಟಿ ದೋಷ ಹೊಂದಿರುವ 2.45 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮಕ್ಕೆ ನಾಳೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವೇರಿಯಲ್ಲಿ ನಾಳೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹಾವೇರಿ, ಕಲಬುರಗಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 56,59,036 ಜನರ ಪ್ರಾಥಮಿಕ ತಪಾಸಣೆ ನಡೆಸಿದ್ದು, 8,28,884 ಜನರಿಗೆ ನೇತ್ರ ಸಂಬಂಧಿ ತೊಂದರೆ ಕಂಡು ಬಂದಿದೆ. ಎರಡನೇ ಹಂತದ ಚಿಕಿತ್ಸೆಗೆ ಒಳಪಡಿಸಿದಾಗ 2.45,588 ಜನರಿಗೆ ದೃಷ್ಟಿ ದೋಷ ಇರುವುದು ಪತ್ತೆಯಾಗಿದ್ದು, ಅವರಿಗೆ ಉಚಿತವಾಗಿ ಕನ್ನಡಕ ಒದಗಿಸಲಾಗುತ್ತದೆ. 39,336 ಜನರಿಗೆ ಕಣ್ಣಿನ ಪೊರೆ ಕಂಡುಬಂದಿದ್ದು, ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.