ಕೊಳ್ಳೇಗಾಲ : ಕ್ಯಾಂಟರ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಪ್ಲೈವುಡ್ ಶೀಟ್ ಗಳ ನಡುವೆ 221 ಕೆಜಿ ಗಾಂಜಾವನ್ನು ಅಡಗಿಸಿಟ್ಟಿದ್ದರು. ವಶಪಡಿಸಿಕೊಂಡ ಗಾಂಜಾದ ಮೌಲ್ಯ ಸುಮಾರು 1.10 ಕೋಟಿ ರೂ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಸೆಂಥಿಲ್ ಕುಮಾರ್, ರವಿಕುಮಾರ್, ಉಮಾ ಶಂಕರ್ ಮತ್ತು ವಿನಯ್ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್ಡಿಪಿಎಸ್) ಕಾಯ್ದೆ, 1985 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೆಎ 13 ಡಿ 2235 ನೋಂದಣಿ ಸಂಖ್ಯೆಯ ವಾಹನವು ಆಂಧ್ರಪ್ರದೇಶದಿಂದ ಹನೂರು ಕಡೆಗೆ ಹೋಗುತ್ತಿದ್ದಾಗ ಪೊಲೀಸರು 10 ಕಿಮೀ ಬೆನ್ನಟ್ಟಿ ವಶಪಡಿಸಿಕೊಂಡಿದ್ದಾರೆ.
ಕ್ಯಾಂಟರ್ ವಾಹನವನ್ನು ಬಳಸಿಕೊಂಡು ಗಾಂಜಾ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಮಂಗಳವಾರ ರಾತ್ರಿ ಪೊಲೀಸರು ಅವರನ್ನು ಬೆನ್ನಟ್ಟಲು ಪ್ರಾರಂಭಿಸಿದಾಗ ಆರೋಪಿಗಳು ವಾಹನದೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಸುಮಾರು ೧೦ ಕಿಲೋಮೀಟರ್ ದೂರವನ್ನು ಬೆನ್ನಟ್ಟಿದ ನಂತರ ಪೊಲೀಸರು ವಾಹನವನ್ನು ನಿಲ್ಲಿಸಿದರು. ಗಾಂಜಾವನ್ನು ಚೀಲಗಳಲ್ಲಿ ತುಂಬಿಸಿ ವಾಹನದಲ್ಲಿನ ಪ್ಲೈವುಡ್ ಶೀಟ್ ಗಳ ನಡುವೆ ಅಡಗಿಸಿಡಲಾಗಿತ್ತು. ಇದು ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಅತಿದೊಡ್ಡ ಮಾದಕವಸ್ತು ದಂಧೆಯ ಕಾರ್ಯಾಚರಣೆಯಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ.