ಬಳ್ಳಾರಿ: ಪಿಂಚಣಿ ಇಲ್ಲದೇ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ನೊಂದ ಜೆಸ್ಕಾಂ ನಿವೃತ್ತ ನೌಕರರೊಬ್ಬರು ಕಚೇರಿ ಎದುರು ಭಿಕ್ಷಾಟನೆಗೆ ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ನಿವೃತ್ತ ಪವರ್ ಮ್ಯಾನ್ ನಿಜಲಿಂಗಪ್ಪ ಪಿಂಚಣಿ ಹಣಕ್ಕಾಗಿ ಒತ್ತಾಯಿಸಿ ಭಿಕ್ಷಾಟನೆಗೆ ಕುಳಿತಿದ್ದಾರೆ. ಬಳ್ಳಾರಿಯ ಜೆಸ್ಕಾಂ ಕಚೇರಿ ಗೇಟ್ ಮುಂದೆ ಟವೆಲ್ ಹಾಸಿಕೊಂಡು ಕುಳಿತಿದ್ದು, ಪಿಂಚಣಿ ಹಣ ಬರ್ತಿಲ್ಲ. ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.
ನಿಜಲಿಂಗಪ್ಪ ಪವರ್ ಮ್ಯಾನ್ ಆಗಿ 1997ರಲ್ಲಿ ದಿನಗೂಲಿ ನೌಕರರಾಗಿ ಕೆಲಸ ಸೇರಿದ್ದರು. 2008ರಲ್ಲಿ ಕೆಲಸ ಪರ್ಮನೆಂಟ್ ಆಗಿತ್ತು. 2022ರಲ್ಲಿ ನಿವೃತ್ತಿ ಹೊಂದಿದ್ದರು. ಎನ್ ಪಿಎಸ್ ಅಡಿ ಪಿಂಚಣಿ ಹಣ ಬರಬೇಕಿತ್ತು. ಆದರೆ ಬಂದಿಲ್ಲ. ಇದರಿಂದ ನಿಜಲಿಂಗಪ್ಪ ಕೋರ್ಟ್ ಮೆಟ್ಟಿಲೇರಿದ್ದರು. 1997ರಿಂದ ಕೆಲದ್ಸ ಮಾಡಿದ್ದರಿಂದ ಒಪಿಎಸ್ ಅಡಿ ಪಿಂಚಣಿ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶ ನೀಡಿದರೂ ಪಿಂಚಣಿ ಹಣ ಮಾತ್ರ ಸಿಕ್ಕಿಲ್ಲ. ಎರಡು ವರ್ಷಗಳಿಂದ ಪಿಂಚಣಿ ಹಣಕ್ಕಾಗಿ ಅಲೆದಾಡಿ ಬೇಸತ್ತಿದ್ದಾರೆ. ಇದರಿಂದ ನೊಂದ ನಿಜಲಿಂಗಪ್ಪ ಜೆಸ್ಕಾಂ ಮುಂದೆ ಭಿಕ್ಷಾಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.