ನವದೆಹಲಿ: ನ್ಯೂಯಾರ್ಕ್ -ದೆಹಲಿ ವಿಮಾನದಲ್ಲಿ ಸೀಟುಗಳು ಮುರಿದುಹೋದ ಕಾರಣದಿಂದ ಅನುಭವಿಸಿದ ಸಂಕಷ್ಟಕ್ಕಾಗಿ ಇಬ್ಬರು ಹಿರಿಯ ನಾಗರಿಕರಿಗೆ 50,000 ರೂ. ಪರಿಹಾರವಾಗಿ ಪಾವತಿಸುವಂತೆ ಏರ್ ಇಂಡಿಯಾಗೆ ಚಂಡೀಗಢ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.
ಅಧ್ಯಕ್ಷ ಪವನ್‌ಜಿತ್ ಸಿಂಗ್ ಮತ್ತು ಸದಸ್ಯ ಸುರೇಶ್ ಕುಮಾರ್ ಸರ್ದಾನ ಅವರು, ಆಸನಗಳು ದೋಷಪೂರಿತವಾಗಿವೆ ಎಂದು ಸಾಕ್ಷ್ಯಗಳು ಸೂಚಿಸಿವೆ. ಇದು ದೂರುದಾರರಿಗೆ ದೈಹಿಕ ಅಸ್ವಸ್ಥತೆಗೆ, ಮಾನಸಿಕ ಯಾತನೆಗೆ ಕಾರಣವಾಯಿತು ಎಂದಿದೆ.
ಏರ್ ಇಂಡಿಯಾ ಲಿಮಿಟೆಡ್ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಸೆಕ್ಷನ್ 34 ರ ಅಡಿಯಲ್ಲಿ ರಾಜೇಶ್ ಚೋಪ್ರಾ ಮತ್ತು ಗಾಮಿನಿ ಚೋಪ್ರಾ ಎಂಬ ಇಬ್ಬರು ಹಿರಿಯ ನಾಗರಿಕರು ಸಲ್ಲಿಸಿದ ಗ್ರಾಹಕರ ದೂರಿನ ವಿಚಾರಣೆ ನಡೆಸಿ ಈ ಆದೇಶವನ್ನು ನೀಡಲಾಗಿದೆ.
ದೂರಿನ ಪ್ರಕಾರ, ದಂಪತಿಗಳು ನ್ಯೂಯಾರ್ಕ್‌ನಿಂದ ನವದೆಹಲಿಗೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದಾರೆ. ಏರ್ ಇಂಡಿಯಾಕ್ಕೆ 8,24,964 ರೂ. ಪಾವತಿಸಿದ್ದಾರೆ. ರಾಜೇಶ್ ಚೋಪ್ರಾ ಅವರು ಬ್ರೈನ್ ಸ್ಟ್ರೋಕ್ ರೋಗಿಯಾಗಿದ್ದು, ಫಿಸಿಯೋಥೆರಪಿ ಸೆಷನ್ ಗಳಿಗೆ ಒಳಗಾಗಲು ಅಮೆರಿಕಕ್ಕೆ ಹೋಗಿದ್ದರು. ಅಂಗವಿಕಲರಾಗಿರುವುದರಿಂದ ದಂಪತಿಗಳು ಯಾವುದೇ ತೊಂದರೆಯಿಲ್ಲದೆ ಆರಾಮವಾಗಿ ಪ್ರಯಾಣಿಸಬಹುದು ಎಂದು ಪರಿಗಣಿಸಿ ಬಿಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ. ಅವರು 14 ಗಂಟೆಗಳ ಪ್ರಯಾಣದ ವೇಳೆ ಮುರಿದ ಸೀಟ್ ಗಳ ಮೇಲೆ ಕುಳಿತುಕೊಳ್ಳಲು ಬಲವಂತ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದರಿಂದಾಗಿ ರಾಜೇಶ್ ಚೋಪ್ರಾ ಅವರ ಪಾದಗಳಲ್ಲಿ ವಿಪರೀತ ಊತ ಮತ್ತು ನೋವು ಉಂಟಾಗಿದೆ. ದೂರಿನೊಂದಿಗೆ, ವಿಮಾನದ ಸೀಟು ಕೊರತೆಯ ಫೋಟೋಗಳನ್ನು ಲಗತ್ತಿಸಲಾಗಿದೆ.
ದೂರುದಾರರು ಈ ಸಮಸ್ಯೆಗೆ ಸಂಬಂಧಿಸಿದಂತೆ ಏರ್ ಇಂಡಿಯಾಗೆ ಇಮೇಲ್ ಕಳುಹಿಸಿದಾಗ, ದೂರುದಾರರಿಗೆ ಉಂಟಾದ ಅನಾನುಕೂಲತೆಗಾಗಿ ಏರ್ ಇಂಡಿಯಾ ವಿಷಾದಿಸಿದೆ ಹೊರತು ಯಾವುದೇ ಪರಿಹಾರ ನೀಡಿಲ್ಲ.
ದೂರುದಾರರಿಗೆ ನೀಡಲಾದ ಆಸನಗಳು ದೋಷಪೂರಿತವಾಗಿವೆ ಎಂದು ದಾಖಲೆಗಳು ಸ್ಪಷ್ಟವಾಗಿ ತೋರಿಸಿವೆ ಎಂದು ನ್ಯಾಯಾಲಯ ಗಮನಿಸಿದೆ. ಆದ್ದರಿಂದ, ಸೇವೆ ಒದಗಿಸುವಲ್ಲಿನ ಕೊರತೆ ಕಾರಣ ಪರಿಹಾರ ಮೊತ್ತ ಪಾವತಿಸುವಂತೆ ತಿಳಿಸಿದೆ. ದಂಪತಿಗೆ 50,000 ರೂ. ಪರಿಹಾರ, 10,000 ರೂ. ವ್ಯಾಜ್ಯ ವೆಚ್ಚ ಏರ್‌ಲೈನ್‌ನಿಂದ ಪಾವತಿಸಬೇಕು ಎಂದು ತಿಳಿಸಿದೆ.