ಪ್ರತಿ ಬಾರಿ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಲು ಸಾಧ್ಯವಾಗೋದಿಲ್ಲ. ಕೆಲವು ಸಂದರ್ಭದಲ್ಲಿ ಒಂಟಿಯಾಗಿ ಪ್ರಯಾಣ ಬೆಳೆಸಬೇಕಾಗುತ್ತದೆ. ಮತ್ತೆ ಕೆಲವರು ಒಂಟಿ ಪ್ರಯಾಣವನ್ನು ಇಷ್ಟಪಡ್ತಾರೆ. ಪ್ರವಾಸಕ್ಕೆ ಹೋಗುವ ಮುನ್ನ ಕೆಲವೊಂದು ವಿಷ್ಯಗಳನ್ನು ತಿಳಿಯಬೇಕು. ಕೆಲ ತಯಾರಿ ಮಾಡಬೇಕು.
ಹೋಗುವ ಸ್ಥಳದ ಬಗ್ಗೆ ಮಾಹಿತಿ ಪಡೆಯಿರಿ : ನಿಮ್ಮ ಪ್ರಯಾಣ ಕೆಲ ದಿನಗಳ ಮೊದಲೇ ಫಿಕ್ಸ್ ಆಗಿದ್ದರೆ ನಿಮಗೆ ಸಮಯ ಸಿಗುತ್ತದೆ. ನೀವು ಹೋಗುವ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ. ಅಲ್ಲಿನ ವಾತಾವರಣ, ಅಲ್ಲಿ ನೋಡಬಹುದಾದ ಸ್ಥಳ, ಅಲ್ಲಿ ಉಳಿಯುವ ವ್ಯವಸ್ಥೆ, ಆ ಸ್ಥಳಕ್ಕೆ ಹೋಗುವ ಮಾರ್ಗ ಎಲ್ಲದರ ಬಗ್ಗೆ ನಿಮಗೆ ಮಾಹಿತಿ ಇದ್ದಲ್ಲಿ ನಿಮ್ಮ ಪ್ರಯಾಣ ಸುಗಮವಾಗಿರುತ್ತದೆ.
ಕಡಿಮೆ ಲಗೇಜ್ ಇರಲಿ : ನೀವೊಬ್ಬರೇ ಎಲ್ಲ ಕಡೆ ಸುತ್ತಾಡಬೇಕು. ಈ ಸಮಯದಲ್ಲಿ ನಿಮ್ಮ ಲಗೇಜ್ ಹೆಚ್ಚಿದ್ದಲ್ಲಿ ಓಡಾಟ ಕಷ್ಟವಾಗುತ್ತದೆ. ನೀವು ಎಷ್ಟು ದಿನ ಆ ಸ್ಥಳದಲ್ಲಿರುತ್ತೀರಿ ಎಂಬುದನ್ನು ಲೆಕ್ಕ ಹಾಕಿ, ಅದಕ್ಕೆ ತಕ್ಕಂತೆ ಬಟ್ಟೆ, ಶೂಗಳನ್ನು ಪ್ಯಾಕ್ ಮಾಡಿ. ಅನವಶ್ಯಕವಾಗಿ ಅದಿರಲಿ, ಇದಿರಲಿ ಅಂತಾ ಹೆಚ್ಚುವರಿ ಬಟ್ಟೆ, ವಸ್ತುಗಳನ್ನು ಬ್ಯಾಗ್ ಗೆ ತುಂಬಿ ಲಗೇಜ್ ಹೆಚ್ಚು ಮಾಡಿಕೊಳ್ಳಬೇಡಿ.
ಅಗತ್ಯ ಮಾತ್ರೆ – ವಸ್ತು ಬ್ಯಾಗ್ ನಲ್ಲಿರಲಿ : ಅನೇಕರಿಗೆ ಆರೋಗ್ಯ ಸಂಬಂಧಿ ಸಮಸ್ಯೆ ಇರುತ್ತದೆ. ಪ್ರತಿ ದಿನ ಮಾತ್ರೆ ಸೇವನೆ ಮಾಡುವವರಿರುತ್ತಾರೆ. ಅವರು ಅಗತ್ಯವಾಗಿ ಅವರ ಮಾತ್ರೆ – ಔಷಧಿಗಳನ್ನು ಬ್ಯಾಗ್ ನಲ್ಲಿ ಇಟ್ಟುಕೊಳ್ಳಬೇಕು. ನೀವು ಹೋಗುವ ಸ್ಥಳದಲ್ಲಿ ತಕ್ಷಣ ಮಾತ್ರೆ – ಔಷಧಿ ಸಿಗದೆ ಇರಬಹುದು. ಜ್ವರ, ನೆಗಡಿ, ತಲೆ ನೋವು ಸೇರಿದಂತೆ ಸಾಮಾನ್ಯವಾಗಿ ಕಾಡುವ ರೋಗದ ಮಾತ್ರೆ ನಿಮ್ಮ ಬಳಿ ಇರಲಿ. ಗಾಯ, ನೋವಾದ್ರೆ ಅದಕ್ಕೆ ಬೇಕಾಗುವ ವಸ್ತುಗಳನ್ನು ಕೂಡ ನಿಮ್ಮ ಬಳಿ ಇಟ್ಟುಕೊಳ್ಳಿ.
ಈ ವಸ್ತುವನ್ನು ಎಂದೂ ಮರೆಯಬೇಡಿ : ಒಂಟಿಯಾಗಿ ನೀವು ಪ್ರಯಾಣ ಬೆಳೆಸುತ್ತಿದ್ದರೆ ನಿಮ್ಮ ಬಳಿ ಒಂದು ಡೈರಿ ಇರಲಿ. ಅದರಲ್ಲಿ ತುರ್ತು ಕರೆ ಮಾಡಬಹುದಾದವರ ಫೋನ್ ನಂಬರ್, ವಿಳಾಸವಿರಲಿ. ನಿಮ್ಮ ಹೆಸರು, ಮಾಹಿತಿ ಇರುವ ಕಾರ್ಡ್ ಗಳನ್ನು ಕೂಡ ಬ್ಯಾಗ್ ನಲ್ಲಿ ಇಟ್ಟುಕೊಳ್ಳಿ. ನಿಮ್ಮ ಮೊಬೈಲ್ ನಲ್ಲಿ ಸಾಕಷ್ಟು ಫೋನ್ ನಂಬರ್ ಇರಬಹುದು.
ಆದ್ರೆ ಆ ಕ್ಷಣದಲ್ಲಿ ನಿಮ್ಮ ಫೋನ್ ಲಾಕ್ ಓಪನ್ ಮಾಡಲು, ಆಪ್ತರು ಯಾರು ಎಂಬುದನ್ನು ಪತ್ತೆ ಮಾಡಲು ಕಷ್ಟವಾಗುತ್ತದೆ. ಡೈರಿ ಇದ್ದಲ್ಲಿ ನಿಮಗೆ ಏನೇ ಸಮಸ್ಯೆ ಆದ್ರೂ ನಿಮ್ಮ ಬಗ್ಗೆ ಬೇರೆಯವರಿಗೆ ಬೇಗ ಮಾಹಿತಿ ತಿಳಿಯುತ್ತದೆ. ಇದಲ್ಲದೆ ಫೋನ್ ಮತ್ತು ಲ್ಯಾಪ್ ಟಾಪ್ ಬಳಸುತ್ತಿದ್ದರೆ ಅದ್ರ ಚಾರ್ಜರ್ ನಿಮ್ಮ ಬಳಿ ಇರಲಿ. ಹೊಟೇಲ್, ಮನೆಯಿಂದ ಹೊರಗೆ ಬೀಳುವ ಮೊದಲು ಫೋನ್ ಗೆ ಫುಲ್ ಚಾರ್ಜ್ ಇರುವಂತೆ ನೋಡಿಕೊಳ್ಳಿ.
ಹೆಚ್ಚಿನ ನಗದು ಅಪಾಯಕಾರಿ : ಇದು ಆನ್ಲೈನ್ ಯುಗ. ಬೀದಿ ಬದಿಯ ವ್ಯಾಪಾರಿಗಳಿಂದ ದೊಡ್ಡ ರೆಸ್ಟೋರೆಂಟ್, ಹೊಟೇಲ್ ಎಲ್ಲ ಕಡೆ ಆನ್ಲೈನ್ ಪೇಮೆಂಟ್, ಕಾರ್ಡ್ ನಡೆಯುತ್ತದೆ. ಹಾಗಾಗಿ ನೀವು ಅತಿ ಹೆಚ್ಚು ನಗದನ್ನು ಬ್ಯಾಗ್ ನಲ್ಲಿಟ್ಟುಕೊಂಡು ಪ್ರವಾಸಕ್ಕೆ ಹೋಗುವ ಅಗತ್ಯವಿಲ್ಲ.