ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾಗಿರುವವರು ನೋಂದಣಿ ರದ್ದುಪಡಿಸಲು ಬಯಸಿದಲ್ಲಿ ಅಂತವರಿಗೆ ಆಧಾರ್ ಡಿ- ಲಿಂಕಿಂಗ್ ಸೌಲಭ್ಯ ಕಲ್ಪಿಸಲು ಇಂಧನ ಇಲಾಖೆ ವತಿಯಿಂದ ಎಸ್ಕಾಂಗಳಿಗೆ ಸೂಚನೆ ನೀಡಲಾಗಿದೆ. ಮನೆ ಖಾಲಿ ಮಾಡುವವರಿಗೆ ಇದರಿಂದ ಭಾರಿ ಅನುಕೂಲವಾಗುತ್ತದೆ.
ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ 200 ಯುನಿಟ್ ವರೆಗೆ ಗೃಹ ಬಳಕೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಫಲಾನುಭವಿಗಳು ಅರ್ಹರಿರುವಷ್ಟು ಯುನಿಟ್ ಗೆ ಶೂನ್ಯ ಬಿಲ್ ನೀಡಲಾಗುತ್ತಿದ್ದು, ಇದಕ್ಕೆ ಆಧಾರ್ ಲಿಂಕ್ ಮಾಡಿ ನೊಂದಾಯಿಸಬೇಕು. ಒಂದು ವೇಳೆ ಮನೆ ಖಾಲಿ ಮಾಡಿಕೊಂಡು ಬೇರೆ ಕಡೆಗೆ ಸ್ಥಳಾಂತರವಾದರೆ ಹಳೆ ಮನೆಯ ಆರ್.ಆರ್. ನಂಬರ್ ಗೆ ನೋಂದಾಯಿಸಿಕೊಂಡಿದ್ದ ಆಧಾರ್ ಕಾರ್ಡ್ ಡಿ- ಲಿಂಕಿಂಗ್ ಮಾಡಲು ಸಾಧ್ಯವಿರಲಿಲ್ಲ. ಇದರಿಂದ ಸಮಸ್ಯೆ ಎದುರಿಸುವಂತಾಗಿದೆ.
ಗ್ರಾಹಕರು ತಮ್ಮ ಮನೆ ಬದಲಿಸುವ ಸಂದರ್ಭದಲ್ಲಿ ಗೃಹಜ್ಯೋತಿ ಯೋಜನೆ ಸೌಲಭ್ಯ ಪಡೆಯುತ್ತಿರುವ ಸ್ಥಳದಿಂದ ಸ್ಥಗಿತಗೊಳಿಸಿ ಮತ್ತೊಂದು ಸ್ಥಳದಲ್ಲಿ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲು ಡಿ-ಲಿಂಕಿಂಗ್ ಅಗತ್ಯವಿದ್ದು, ಕೂಡಲೇ ಎಲ್ಲ ಎಸ್ಕಾಂಗಳು ಡಿ-ಲಿಂಕಿಂಗ್ ಸೌಲಭ್ಯ ಕಲ್ಪಿಸಬೇಕು ಎಂದು ಇಂಧನ ಇಲಾಖೆ ಅಧೀನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.