ನವದೆಹಲಿ: ಜಸ್ಪ್ರೀತ್ ಬುಮ್ರಾ ಬುಧವಾರ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ತಲುಪುವ ಮೂಲಕ ಇತಿಹಾಸಿಕ ಸಾಧನೆ ಮಾಡಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ. ಬುಮ್ರಾ, ವಿರಾಟ್ ಕೊಹ್ಲಿ ನಂತರ ಎಲ್ಲಾ ಮೂರು ಮಾದರಿಗಳಲ್ಲಿ ನಂಬರ್-1 ಆದ ಏಷ್ಯಾದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಶ್ರೇಯಾಂಕವನ್ನು ಸಾಧಿಸಿದ ಮೊದಲ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಸೂಪರ್ ಸ್ಟಾರ್ ಬೌಲರ್ ಪಾತ್ರರಾದರು. ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಬುಮ್ರಾ ಅಗ್ರಸ್ಥಾನಕ್ಕೆ ಏರಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ 45 ರನ್ ಗೆ 6 ವಿಕೆಟ್ ಸೇರಿದಂತೆ ಒಟ್ಟು 9 ವಿಕೆಟ್ಗಳನ್ನು ಕಬಳಿಸಿದ ಭಾರತದ ವೇಗದ ಬೌಲರ್, ಆತಿಥೇಯರಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಟ್ಟರು. ಎರಡನೇ ಇನ್ನಿಂಗ್ಸ್ನಲ್ಲಿ ಅವರು ಮೂರು ವಿಕೆಟ್ಗಳನ್ನು ಕಬಳಿಸುವ ಮೂಲಕ ಭಾರತವು 106 ರನ್ಗಳ ಗೆಲುವು ಸಾಧಿಸಿ 5 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.