ಕಾರವಾರ: ಅಳಿವಿನಂಚಿನಲ್ಲಿರುವ ಪರಿಸರ ಸ್ನೇಹಿ ಕಡಲಾಮೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಆಮೆ ಮೊಟ್ಟೆಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಕೈ ಜೋಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದೇವಬಾಗ್ ಕಡಲ ತೀರದಲ್ಲಿ ಸುಮಾರು 70ಕ್ಕೂ ಹೆಚ್ಚು ಆಲಿವ್ ರಿಡ್ಲಿ ಕಡಲಾಮೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಡಲಿಗೆ ಬಿಟ್ಟಿದ್ದಾರೆ.
ದೇವಬಾಗ್ ಕಡಲ ತೀರದಲ್ಲಿ ಕಳೆದ ಡಿಸೆಂಬರ್ ನಲ್ಲಿ 100ಕ್ಕೂ ಹೆಚ್ಚು ಆಲಿವ್ ರಿಡ್ಲಿ ಕಡಲಾಮೆಗಳು 26 ಕಡೆಗಳಲ್ಲಿ ಮೊಟ್ಟೆಗಳನ್ನು ಇಟ್ಟಿದ್ದವು. ಇವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಗೇಜ್ ಗಳನ್ನು ಹಾಕಿ ಸಂರಕ್ಷಿಸಿದ್ದರು. ಇದೀಗ ಸುಮಾರು 70 ಆಮೆಮರಿಗಳು ಮೊಟ್ಟೆ ಒಡೆದು ಹೊರಬಂದಿದ್ದು ಅವುಗಳನ್ನು ಸಮುದ್ರಕ್ಕೆ ಸೇರಿಸಲಾಗಿದೆ.
ಕಡಲಾಮೆಯ ಸಂತತಿ ಅಳಿವಿನ ಅಂಚಿನಲ್ಲಿರುವುದರಿಂದ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿಗಳು ಕಡಲಾಮೆಗಳ ರಕ್ಷಣೆಗೆ ಮುಂದಾಗಿದ್ದಾರೆ. ಕೋಸ್ಟಲ್ ಮರೈನ್ ಆಂಡ್ ಇಕೋ ಸಿಸ್ಟಮ್ ಎಂಬ ವಿಭಾಗ ಆರಂಭವಿಸಿದ್ದಾರೆ. ಇದರಡಿ ಈಗಾಗಲೇ ಕಾರವಾರದ ಕಡಲ ತೀರದಲ್ಲಿ 1500ಕ್ಕೂ ಹೆಚ್ಚು ಆಮೆ ಮೊಟ್ಟೆಗಳನ್ನು ರಕ್ಷಿಸಲಾಗಿದೆ.
ಇನ್ನು ಕಡಲಾಮೆ ಮರಿಗಳ ಗೂಡುಗಳ ಬಗ್ಗೆ ಯಾರಾದರೂ ಸಾರ್ವಜನಿಕರು ಮಾಹಿತಿ ನೀಡಿದರೆ ಅವರಿಗೆ ಸಹಾಯಧನ ಘೋಷಿಸಲಾಗಿದೆ. ಆಮೆ ಗೂಡಿನ ಕುರಿತು ಮಾಹಿತಿ ನೀಡಿದವರಿಗೆ ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಇದರಿಂದ ಕಡಲಾಮೆ ಸಂರಕ್ಷಣೆಗೆ ಸಹಕಾರಿಯಾಗಲಿದೆ.