ಉಡುಪಿ: ಗೃಹಜ್ಯೋತಿ ಯೋಜನೆಯಡಿ ಕಡಿಮೆ ವಿದ್ಯುತ್ ಬಳಕೆದಾರರಿಗೆ ಹೆಚ್ಚುವರಿಯಾಗಿ 10 ಯುನಿಟ್ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಚಾರ್ಜ್ ಹೇಳಿದ್ದಾರೆ.
ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮಣಿಪಾಲ ಕೆಎಂಸಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಉಡುಪಿ ಜಾಮಿಯಾ ಮಸೀದಿ ಆವರಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗೃಹಜ್ಯೋತಿ ಯೋಜನೆಯಡಿ ಕಡಿಮೆ ವಿದ್ಯುತ್ ಬಳಸುವವರಿಗೆ ಯಾವುದೇ ಲಾಭ ಸಿಗುತ್ತಿಲ್ಲ. 15 -20 ಯುನಿಟ್ ವಿದ್ಯುತ್ ಬಳಕೆದಾರರಿಗೆ ಶೇಕಡ 10ರಷ್ಟು ಅಂದರೆ 1.5 ಯುನಿಟ್ ಹೆಚ್ಚುವರಿ ವಿದ್ಯುತ್ ಮಾತ್ರ ಸಿಗುತ್ತಿದೆ. ಹೀಗಾಗಿ 48 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಶೇಕಡ 10ರ ಬದಲು 10 ಯುನಿಟ್ ಕೊಡಲು ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದಾಗಿ 58 ಯುನಿಟ್ ವರೆಗೆ ಹಣ ಪಾವತಿಸಬೇಕಿಲ್ಲ ಎಂದು ಮಾಹಿತಿ ನೀಡಿದ್ದಾರೆ.