ತಿರುಪತಿ: ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಮುಸ್ಲಿಂ ಭಕ್ತರಿಗೂ ಶ್ರೀವಾರಿ ಸೇವೆಗೆ ಅವಕಾಶ ಕಲ್ಪಿಸಲು ಪರಿಶೀಲನೆ ನಡೆಸುವುದಾಗಿ ಟಿಟಿಡಿ ತಿಳಿಸಿದೆ.
ಟಿಟಿಡಿ ಆಡಳಿತಾಧಿಕಾರಿಗಳೊಂದಿಗೆ ಮಾಸಿಕವಾಗಿ ನಡೆಸುವ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ನಾಯ್ಡುಪೇಟೆಯ ಮುಸ್ಲಿಂ ಭಕ್ತ ಹುಸ್ಸೈನ್ ಬಾಷಾ ತಮಗೂ ಶ್ರೀವಾರಿ ಸೇವೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಬೇರೆ ಧಾರ್ಮಿಕ ಪಂಥಕ್ಕೆ ಸೇರಿದ ವ್ಯಕ್ತಿಗಳು ತಿಮ್ಮಪ್ಪನ ಸೇವೆ ಮಾಡಲು ಆಸಕ್ತಿ ತೋರಿಸಿರುವುದು ಹರ್ಷದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಟಿಟಿಡಿ ಪರಿಶೀಲನೆ ನಡೆಸಲಿದೆ ಎಂದು ಹೇಳಲಾಗಿದೆ.
ಶ್ರೀವಾರಿ ಸೇವೆ ಎಂದರೆ ಸ್ವಯಂಸೇವೆ ಎಂದರ್ಥ. ಭಕ್ತರು ಬಯಸಿದರೆ ದೇವಾಲಯದ 60 ವಿಭಾಗಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಬಹುದು. ಆರೋಗ್ಯ, ಉದ್ಯಾನ, ವೈದ್ಯಕೀಯ, ಅನ್ನಶಾಲೆ, ಲಾಡು, ಸಮರ್ಪಣೆ, ದೇವಾಲಯ, ಸಾರಿಗೆ, ಕಲ್ಯಾಣ ಮಂದಿರ, ಪುಸ್ತಕ ಮಳಿಗೆ ಮೊದಲಾದ ವಿಭಾಗಗಳಲ್ಲಿ ಶ್ರೀವಾರಿ ಸೇವೆ ಸಲ್ಲಿಸಬಹುದಾಗಿದೆ.