ಬೆಂಗಳೂರು : 1137 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ದಿನಾಂಕ ನಿಗದಿಯಾಗಿದ್ದು, ಫೆ.25 ರಂದು ಲಿಖಿತ ಪರೀಕ್ಷೆ ನಡೆಯಲಿದೆ ಎಂದು ರಾಜ್ಯ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
25-02-2024 ರಂದು ಪರೀಕ್ಷೆ ನಡೆಯಲಿದ್ದು, ಜ.28 ರಂದು ನಡೆದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ -3064 ಹುದ್ದೆಗಳ ಲಿಖಿತ ಪರೀಕ್ಷೆಗಾಗಿ ನೀಡಲಾದ ಪರೀಕ್ಷಾ ಕೇಂದ್ರಗಳನ್ನೇ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್- 1137 ಹುದ್ದೆಗಳ ಲಿಖಿತ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲು ಇಲಾಖೆ ನಿರ್ಧರಿಸಿದೆ.
ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) (ಪುರುಷ ಮತ್ತು ಮಹಿಳಾ) ಮತ್ತು (ತೃತೀಯ ಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾ ನಿರತ ಮತ್ತು ಬ್ಯಾಕ್ಲಾಗ್ 1137 ಹುದ್ದೆಗಳ ನೇರ ನೇಮಕಾತಿ ಸಂಬಂಧ ಅಧಿಸೂಚನೆಯನ್ನು ಹೊರಡಿಸಲಾಗಿತ್ತು.
ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ
* ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮೊದಲು 100 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದು ಬಹುವಿಧ ಉತ್ತರ ಆಯ್ಕೆಗಳ ಪರೀಕ್ಷೆ ಆಗಿರುತ್ತದೆ.
*ಮೊದಲು ದೇಹದಾರ್ಢ್ಯತೆ ಪರೀಕ್ಷೆ ನಡೆಸಿ, ಇದರಲ್ಲಿ ಅರ್ಹರಾದವರಿಗೆ ಸಹಿಷ್ಣುತೆ ಪರೀಕ್ಷೆ ನಡೆಸಲಾಗುತ್ತದೆ. ನಂತರ ತಾತ್ಕಾಲಿಕ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗುತ್ತದೆ.
*ಲಿಖಿತ ಪರೀಕ್ಷೆಯಲ್ಲಿ 1:5 ರ ಅನುಪಾತದಡಿ ಒಟ್ಟು ಹುದ್ದೆಗೆ ಅರ್ಹಗೊಂಡ ಅಭ್ಯರ್ಥಿಗಳಿಗೆ ದೇಹದಾರ್ಢ್ಯತೆ ಪರೀಕ್ಷೆ ಮತ್ತು ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ.