ಮಕ್ಕಳು ಮನೆಯಲ್ಲಿದ್ದಾರೆ ಅಂದ್ರೆ ಅವರ ಕೈನಲ್ಲಿ ಮೊಬೈಲ್ ಇರುತ್ತೆ. ಮಕ್ಕಳಿಗೆ ಆಹಾರ ತಿನ್ನಿಸೋದ್ರಿಂದ ಹಿಡಿದು ಸಾರ್ವಜನಿಕ ಪ್ರದೇಶದಲ್ಲಿ ಮಕ್ಕಳು ಶಾಂತವಾಗಿರಲಿ ಎನ್ನುವ ಕಾರಣಕ್ಕೆ ಅತಿ ಚಿಕ್ಕ ಮಕ್ಕಳಿಗೆ ಪಾಲಕರು ಮೊಬೈಲ್ ಕೊಟ್ಟು ಕುಳಿಸ್ತಾರೆ. ಆದ್ರೆ ದೀರ್ಘಕಾಲ ಒಂದೇ ಕಡೆ ಕುಳಿತು ಮೊಬೈಲ್ ವೀಕ್ಷಣೆ ಮಾಡೋದು ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಒಳ್ಳೆಯದಲ್ಲ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಟಿವಿ, ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಗ್ಯಾಜೆಟ್ ಮುಂದೆ ಇಡೀ ಸಮಯ ಕಳೆಯುವ ಮಕ್ಕಳ ಜಡ ಜೀವನಶೈಲಿ ಅವರ ಹೃದಯದ ಆರೋಗ್ಯವನ್ನು ಹಾಳು ಮಾಡ್ತಿದೆ. ಈ ಬಗ್ಗೆ ಸಂಶೋಧನೆ ಕೂಡ ನಡೆದಿದೆ. ಕೂಪಿಯೊದಲ್ಲಿನ ಈಸ್ಟರ್ನ್ ಫಿನ್ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಆಂಡ್ರ್ಯೂ ಅಗ್ಬಾಜೆ ನೇತೃತ್ವದ ಹೊಸ ಅಧ್ಯಯನದ ಪ್ರಕಾರ, ದೀರ್ಘ ಕಾಲ ಕುಳಿತುಕೊಂಡೇ ಇರುವ ಮಕ್ಕಳು ಪ್ರೌಢಾವಸ್ಥೆಯಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗ್ತಾರೆ. ಅಂದ್ರೆ ಹೆಚ್ಚಿನ ಸ್ಕ್ರೀನ್ ಟೈಂ ಅವರ ತೂಕ ಹೆಚ್ಚಿಸಿ, ಹೃದ್ರೋಗಕ್ಕೆ ಕಾರಣವಾಗ್ತಿದೆ.
ಈ ಅಧ್ಯಯನವನ್ನು ದೀರ್ಘಕಾಲ ನಡೆಸಲಾಗಿದೆ. ಹನ್ನೊಂದನೇ ವಯಸ್ಸಿನಿಂದ 24 ವರ್ಷಗಳ ಡೇಟಾವನ್ನು ಸಂಗ್ರಹಿಸಲಾಗಿದೆ. 24 ವರ್ಷಕ್ಕೆ ಕಾಲಿಡುತ್ತಿದ್ದಂತೆ ಅವರ ಸ್ಕ್ರೀನ್ ಟೈಂ ಜಾಸ್ತಿಯಾಗಿತ್ತು. ದಿನಕ್ಕೆ 531 ನಿಮಿಷ ಕುಳಿತುಕೊಳ್ಳುತ್ತಿದ್ದರು. ಇದು ಅವರ ಹೃದಯಾಘಾತ ಮತ್ತು ಪಾರ್ಶ್ವವಾಯುಗಳ ಸಾಧ್ಯತೆಯನ್ನು ಹೆಚ್ಚಿಸಿತು ಎಂದು ಸಂಶೋಧಕರು ಹೇಳಿದ್ದಾರೆ.
ಮಕ್ಕಳ ಹೃದಯ ಗಟ್ಟಿ ಇರಬೇಕು ಅಂದ್ರೆ ಪಾಲಕರು ಮಕ್ಕಳಿಗೆ ಮೊಬೈಲ್ ನೀಡೋದನ್ನು ಬಿಡಬೇಕು. ಮಕ್ಕಳು ಒಂದೇ ಕಡೆ ದೀರ್ಘಕಾಲ ಕುಳಿತುಕೊಳ್ಳುವುದನ್ನು ತಪ್ಪಿಸಬೇಕು. ಅವರು ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು.