ಗದಗ: ಗದಗ ಜಿಲ್ಲೆಯ ಗಜೇಂದ್ರಘಡದಲ್ಲಿ ನವಜಾತ ಅವಳಿ ಮಕ್ಕಳು ಸಾವನ್ನಪ್ಪಿದ್ದು, ಇದೇ ವೇಳೆ ತೀವ್ರ ರಕ್ತಸ್ರಾವದಿಂದಾಗಿ ಬಾಣಂತಿ ತಾಯಿ ಕೂಡ ಕೊನೆಯುಸಿರೆಳೆದಿರುವ ದಾರುಣ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವಿರುಪಾಪುರ ಗ್ರಾಮದ ತುಂಬು ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ಕಾರೋಡಗಿಮಠ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುಂಬುಗರ್ಭಿಣಿ ನಂದಿನಿ ಫೆ.2ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಹೆರಿಗೆ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿವೆ.
ಇನ್ನು ಬಾಣಂತಿ ನಂದಿನಿ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಶಿಫ್ಟ್ ಮಾಡಿದ್ದಾರೆ. ಆದರೆ ಬಾಣಂತಿ ಕೂಡ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ.
ವೈದ್ಯರ ನಿರ್ಲಕ್ಷವೇ ಸಾವಿಗೆ ಕರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಗಜೇಂದ್ರಗಢ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕುಟುಂಬದವರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಗಜೇಂದ್ರಗಢ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಬಳಿಕವೇ ಅವಳಿ ಮಕ್ಕಳ ಹಾಗೂ ಬಾಣಂತಿ ಸಾವಿನ ಸತ್ಯ ಬಯಲಾಗಲಿದೆ.