ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನಲ್ಲಿ ಒಂದೇ ದಿನ 10 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. ಸಿದ್ದಾಪುರ ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜಿಡ್ಡಿ ಗ್ರಾಮದಲ್ಲಿ ಮತ್ತೆ ಎಂಟು ಜನರಿಗೆ ಮಂಗನ ಕಾಯಿಲೆ ಕಂಡು ಬಂದಿದೆ.
ಸಿದ್ದಾಪುರ ಪಟ್ಟಣ ವ್ಯಾಪ್ತಿಯ ಕೊಂಡ್ಲಿ, ಸೋವಿನಕೊಪ್ಪದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ಒಂದೇ ದಿನದಲ್ಲಿ 10 ಕೆ.ಎಫ್.ಡಿ. ಪ್ರಕರಣ ಪತ್ತೆಯಾಗಿವೆ. ಇದುವರೆಗೆ 18 ಮಂದಿಗೆ ಮಂಗನ ಕಾಯಿಲೆ ತಗುಲಿದಂತಾಗಿದೆ. ಬಾಲಕ ಸೇರಿ ಎಂಟು ಜನರಲ್ಲಿ ಈಗಾಗಲೇ ಕೆ.ಎಫ್.ಡಿ. ಕಾಣಿಸಿಕೊಂಡಿದೆ. ಮತ್ತೆ ಹೊಸದಾಗಿ 10 ಮಂದಿಯಲ್ಲಿ ಕೆ.ಎಫ್.ಡಿ. ಕಾಣಿಸಿಕೊಂಡಿದ್ದು, ಐವರು ಆಸ್ಪತ್ರೆಯಲ್ಲಿ ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿದ್ದಾಪುರ ತಾಲೂಕಿನ ಇತರ ಭಾಗಗಳಲ್ಲಿಯೂ ಮಗನ ಕಾಯಿಲೆ ಹರಡುತ್ತಿದೆ. ಕೆಮ್ಮು, ಜ್ವರ, ನೆಗಡಿ ಇರುವವರ ರಕ್ತ ಪರೀಕ್ಷೆ ಹೆಚ್ಚಿಸಬೇಕಿದೆ. ಶಿವಮೊಗ್ಗಕ್ಕೆ ಪರೀಕ್ಷೆಗೆ ರಕ್ತ ಕಳಿಸಬೇಕಿದ್ದು, ಫಲಿತಾಂಶ ಬರಲು ಮೂರು ದಿನ ಬೇಕಾಗುತ್ತದೆ. ಇದರಿಂದ ರೋಗಿಗಳು ಚಿಕಿತ್ಸೆ ಪಡೆಯಲು ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.