ಗಾಝಾದಲ್ಲಿ ಶಾಶ್ವತ ಕದನ ವಿರಾಮಕ್ಕಾಗಿ ಹೊಸ ಪ್ರಸ್ತಾಪಗಳನ್ನು ಹಮಾಸ್ ಪರಿಗಣಿಸುತ್ತಿರುವ ಮಧ್ಯೆ ಉದ್ವಿಗ್ನತೆ ಮುಂದುವರೆದಿದೆ. ದಕ್ಷಿಣ ಗಾಝಾ ನಗರ ಖಾನ್ ಯೂನಿಸ್ ನಲ್ಲಿ ಭೀಕರ ಕದನ ನಡೆಯುತ್ತಿದೆ.
ಹಮಾಸ್ ಕಮಾಂಡರ್ಗಳು ಇಲ್ಲಿನ ಸುರಂಗಗಳಲ್ಲಿ ಅಡಗಿದ್ದಾರೆ ಎಂದು ಇಸ್ರೇಲ್ ಸೇನೆ ಶಂಕಿಸಿದೆ. ಇಸ್ರೇಲಿ ಪಡೆಗಳು ಈ ಸುರಂಗಗಳಿಗೆ ನೀರನ್ನು ಸುರಿಯುವ ಮೂಲಕ ಅವುಗಳನ್ನು ಹೊರಹಾಕಲು ಪ್ರಯತ್ನಿಸುತ್ತಿವೆ.
ಉತ್ತರ ಗಾಝಾದ ಶಾಲೆಯೊಂದರಲ್ಲಿ ಅಡಗಿಕೊಂಡಿದ್ದ 15 ಹಮಾಸ್ ಉಗ್ರರನ್ನು ಇಸ್ರೇಲ್ ಸೇನೆ ಮಂಗಳವಾರ ಹತ್ಯೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಗಾಝಾದ ವಿವಿಧ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ 150 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಮತ್ತು 313 ಜನರು ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಇತ್ತೀಚಿನ ಸಾವುಗಳು ಇಸ್ರೇಲಿ ದಾಳಿಯಲ್ಲಿ ಕೊಲ್ಲಲ್ಪಟ್ಟ ಫೆಲೆಸ್ತೀನೀಯರ ಸಂಖ್ಯೆಯನ್ನು 26,900 ಕ್ಕೆ ಏರಿಸಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.