ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಟ್ರೋಲಿಂಗ್, ಮೀಮ್ಸ್ ಹಾವಳಿ ಹೆಚ್ಚಾಗಿದೆ. ಮಕ್ಕಳು ಕೂಡ ಇದಕ್ಕೆ ಬಲಿಪಶುವಾಗುತ್ತಿದ್ದಾರೆ. ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ, ಚಾಟ್ ರೂಮ್, ಇಮೇಲ್, ಫೇಸ್‌ಬುಕ್, ವಾಟ್ಸಾಪ್‌ನಂತಹ ವೆಬ್‌ಸೈಟ್‌ಗಳು, ಆನ್‌ಲೈನ್ ಗೇಮ್ಸ್ ಹಾಗೂ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಇತರರಿಗೆ ಕಿರುಕುಳ ನೀಡುತ್ತಾರೆ.
ಇದು ಡಿಜಿಟಲ್ ಯುಗ, ಇಂಟರ್ನೆಟ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಹಾಗಾಗಿಯೇ ಆನ್‌ಲೈನ್ ಬುಲ್ಲಿಯಿಂಗ್ ಅಥವಾ ಬೆದರಿಸುವಿಕೆ, ಅಂದರೆ ಇಂಟರ್ನೆಟ್‌ನಲ್ಲಿ ಇತರರಿಗೆ ಕಿರುಕುಳ ನೀಡುವ ಪ್ರವೃತ್ತಿಯೂ ಹೆಚ್ಚುತ್ತಿದೆ.
ಆನ್‌ಲೈನ್ ಬೆದರಿಕೆಯಿಂದಾಗಿ ಮಕ್ಕಳು ಒಂಟಿತನ, ಒತ್ತಡ, ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ, ಪೋಷಕರು ಕೂಡ ಈ ವಿಷಯದ ಬಗ್ಗೆ ಎಚ್ಚರ ವಹಿಸಬೇಕು. ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು.
ಸೈಬರ್ ಬುಲ್ಲಿಯಿಂಗ್ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ಯಾವುದೇ ವ್ಯಕ್ತಿ ಆನ್‌ಲೈನ್‌ನಲ್ಲಿ ಕಿರುಕುಳ ನೀಡಿದರೆ, ನಿಂದನೆ ಮಾಡಿದರೆ ಅಥವಾ ಬೆದರಿಸಿದರೆ, ಆನ್‌ಲೈನ್‌ನಲ್ಲಿ ಅನುಚಿತವಾಗಿ ವರ್ತಿಸಿದರೆ ಅದನ್ನು ಮೊದಲು ಹೆತ್ತವರಿಗೆ ತಿಳಿಸಬೇಕು. ಇದಕ್ಕೆಲ್ಲ ಭಯಪಡುವ ಅಗತ್ಯವಿಲ್ಲ.
ಪೋಷಕರು ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು. ಮಕ್ಕಳ ಸೋಶಿಯಲ್ ಮೀಡಿಯಾ ಅಕೌಂಟ್ಸ್ ಮತ್ತು ಮೊಬೈಲ್ ಫೋನ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ. ಡಿವೈಸ್‌ಗಳು ಮತ್ತು ಇಂಟರ್ನೆಟ್ ಬಳಕೆಗೆ ಸಮಯ ನಿಗದಿಪಡಿಸಿ.
ಸಾಮಾಜಿಕ ಮಾಧ್ಯಮ ಮತ್ತು ಗೇಮಿಂಗ್ ಅಪ್ಲಿಕೇಶನ್‌ಗಳನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಿ. ವೈಯಕ್ತಿಕ ಮಾಹಿತಿಯನ್ನು ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳಬೇಕು, ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಮಾತನಾಡಬಾರದು, ಫೋಟೋಗಳನ್ನು ಅವರಿಗೆ ಕಳುಹಿಸಬಾರದು ಎಂಬುದನ್ನೆಲ್ಲ ಮಕ್ಕಳಿಗೆ ಅರ್ಥಮಾಡಿಸಬೇಕು. ಅಷ್ಟೇ ಅಲ್ಲ ಮಕ್ಕಳು ಇಂತಹ ಆನ್‌ಲೈನ್ ಬುಲ್ಲಿಯಿಂಗ್‌ಗೆ ತುತ್ತಾದರೆ ಶಾಲೆಯ ಆಡಳಿತ ಮಂಡಳಿ ಮತ್ತು ಸೈಬರ್ ಕ್ರೈಮ್ ಸೆಲ್ ಅನ್ನು ಸಂಪರ್ಕಿಸಬೇಕು.