ಬೆಂಗಳೂರು: ಮಂಡ್ಯದಲ್ಲಿ ಧ್ವಜ ವಿವಾದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಶಾಂತಿ ಕದಡಬೇಕು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬೇಕು ಎಂದು ಮುಗ್ಧ ಹಳ್ಳಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಅನಗತ್ಯವಾಗಿ ಕೋಮು ಗಲಭೆ ಪ್ರಯೋಗ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಪಂಚಾಯ್ತಿಯವರು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಮಾತ್ರ ಹಾರಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ರಾಷ್ಟ್ರ ಧ್ವಜ ಹಾಗೂ ಕನ್ನಡ ಬಾವುಟಕ್ಕೆ ಗೌರವ ನೀಡಬೇಕು. ಕನ್ನಡದಲ್ಲೇ ನಾಮಫಲಕ ಇರಬೇಕು ಎಂದೂ ನಾವು ಕಾನೂನು ಮಾಡಿದ್ದೇವೆ. ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದ್ದೆವು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಬಹುದಾಗಿತ್ತು, ಆದರೆ ಅವರು ವಿಧಾನ ಮಂಡಲ ಅಧಿವೇಶನದಲ್ಲೇ ಜಾರಿ ಮಾಡಲು ಹೇಳಿದ್ದಾರೆ. ರಾಷ್ಟ್ರ ಧ್ವಜ, ಸಂವಿಧಾನಕ್ಕೆ ಏನು ಗೌರವ ನೀಡಬೇಕೋ ಆ ಗೌರವ ನೀಡುವುದು ನಮ್ಮ ಬದ್ಧತೆ. ಜನ ಎಲ್ಲವನ್ನು ಗಂಭೀರವಾಗಿ ಗಮನಿಸುತ್ತಿದ್ದಾರೆ ಎಂದರು.
ಬಿಜೆಪಿಯವರು ಮನೆ, ಮನೆಗೆ ಕೇಸರಿ ಧ್ವಜ ಹಂಚಲು ಮುಂದಾಗುತ್ತಿದ್ದಾರೆ. ಬೇಡ ಎಂದು ಹೇಳಿದವರು ಯಾರು? ಬಿಜೆಪಿಯವರು ಹರ್ ಘರ್ ತಿರಂಗಾ ಎಂದು ಪ್ರಚಾರ ಮಾಡಿದ್ದರು. ಈಗ ಆ ತಿರಂಗಾವನ್ನು ಯಾಕೆ ಮರೆತಿದ್ದಾರೆ? ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ತಿರಂಗಾ ಬದಲಿಗೆ ಕೇಸರಿ ಧ್ವಜವನ್ನೇ ಕಾನೂನು ಮೂಲಕ ತರಲಿ, ಬೇಡ ಎಂದವರು ಯಾರು? ಎಂದು ಪ್ರಶ್ನಿಸಿದರು.