ಮಂಗಳೂರು: ವೇಣೂರು ಬಳಿಯ ಪಟಾಕಿ ಗೋಡೌನ್ ನಲ್ಲಿ ಸ್ಫೋಟ ಸಂಭವಿಸಿ ಮೂವರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೈಯದ್ದ್ ಬಶೀರ್ ಬಂಧಿತ ಆರೋಪಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ಜ.28ರಂದು ಸಂಜೆ ಪಟಾಕಿ ಗೋದಾಮಿನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಕಾರ್ಮಿಕರ ಮೃತ ದೇಹ ಸಂಪೂರ್ಣ ಛಿದ್ರ ಛಿದ್ರವಾಗಿವೆ. ಘಟನೆಯಲ್ಲಿ 6 ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನಾ ಸ್ಥಳದಲ್ಲಿ ಪತ್ತೆಯಾಗಿರುವ ವಸ್ತುಗಳು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಗ್ರೆನೇಡ್ ಮಾದರಿಯ ಸ್ಫೋಟಕಗಳನ್ನು ಇಲ್ಲಿ ತಯಾರಿಸುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಕರಣ ಸಂಬಂಧ ಗೋದಾಮಿನ ಮಾಲೀಕ, ಆರೋಪಿ ಸೈಯದ್ ಬಶೀರ್ ನನ್ನು ಪೊಲೀಸರು ಬಂಧಿಸಿದ್ದಾರೆ. ವೇಣೂರಿನಿಂದ ಪರಾರಿಯಾಗುತ್ತಿದ್ದ ಬಶೀರ್ ನನ್ನು ಸುಳ್ಯ ಬಳಿ ಬಂಧಿಸಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಕೊಚ್ಚೋಡಿ ನಿವಾಸಿ ಬಶೀರ್ ಈ ಸ್ಥಳದಲ್ಲಿ 2011-12ರಲ್ಲಿ ಸ್ಫೋಟಕ ತಯಾರಿಕೆಗೆ ಲೈಸನ್ಸ್ ಪಡೆದ ಎಂದು ತಿಳಿದುಬಂದಿದೆ.