
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು, ಹಿಂಗಾರು ಮಳೆ ತೀವ್ರ ಕುಸಿತ ಪರಿಣಾಮ 236 ತಾಲ್ಲೂಕು ಬರ ಪೀಡಿತ ಎಂದು ಘೋಷಣೆಯಾಗಿದೆ. ಮಳೆ ಇಲ್ಲದ ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಕುಸಿತ ಕಂಡಿದೆ. ಅಂತರ್ಜಲ ಮಟ್ಟ ಕುಸಿತವಾಗಿ ಬೋರ್ವೆಲ್ ಗಳು ಬತ್ತಿ ಹೋಗಿ ನೀರು ಬರದಂತಾಗಿದೆ.
ಬೇಸಿಗೆ ಆರಂಭಕ್ಕೆ ಮೊದಲೇ ರಾಜ್ಯದಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಲಾಶಯಗಳು, ಕೆರೆಕಟ್ಟೆಗಳಲ್ಲಿ ನೀರು ಭಾರಿ ಕಡಿಮೆಯಾಗಿದೆ.
ಈಗಾಗಲೇ ಹಲವೆಡೆ ನೀರಿನ ಸಮಸ್ಯೆ ಆರಂಭವಾಗಿದ್ದು, ಖಾಸಗಿ ಬೋರ್ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಬಹುತೇಕ ಅಚ್ಚುಕಟ್ಟು ಪ್ರದೇಶಗಳಲ್ಲಿ ಕೃಷಿ ಬಳಕೆಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಕೆಲವು ಕಡೆ ನೀರಿನ ಸಮಸ್ಯೆ ಇಲ್ಲವಾದರೂ ಮತ್ತೆ ಕೆಲವು ಕಡೆ ನೀರಿನ ಅಭಾವ ತೀವ್ರತರವಾಗಿದೆ.
ಅನೇಕ ಗ್ರಾಮೀಣ ಪ್ರದೇಶ ಪಟ್ಟಣಗಳಲ್ಲಿ ಎರಡು, ಮೂರು, ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಅನೇಕ ಗ್ರಾಮಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಯುಗಾದಿ ವೇಳೆಗೆ ನೀರಿಗೆ ಹಾಹಾಕಾರ ಶುರುವಾಗಲಿದೆ ಎಂದು ಹೇಳಲಾಗಿದೆ.