![](https://kannadadunia.com/wp-content/uploads/2023/11/anna-Bhagya-gruha-lakshmi.jpg)
ರಾಜ್ಯ ಸರಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಾರಿಗೊಳಿಸಿರುವ ಜನಪರ ಗ್ಯಾರಂಟಿ ಯೋಜನೆಗಳು ರಾಷ್ಟ್ರಕ್ಕೆ ಮಾದರಿಯಾಗಿವೆ. ಗ್ಯಾರಂಟಿ ಪ್ರಯೋಜನವನ್ನು ಪ್ರತಿ ಅರ್ಹ ಪಲಾನುಭವಿಗೆ ತಲುಪಿಸಲು ಜನರಲ್ಲಿ ಗ್ಯಾರಂಟಿಗಳ ಅರಿವು ಮೂಡಿಸುವ ಅಗತ್ಯವಿದ್ದು, ಅದಕ್ಕಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು.
ಸರಕಾರದ ಅಭಿವೃದ್ದಿ ಯೋಜನೆಗಳನ್ನು ಸಮುದಾಯ, ವ್ಯಕ್ತಿಗಳಿಗೆ ಮುಟ್ಟಿಸಬೇಕು. ಗ್ಯಾರಂಟಿ ಯೋಜನೆಗಳ ಜೊತೆಗೆ ವಿವಿಧ ಇಲಾಖೆಗಳಿಗೆ ವಿವಿಧ ಯೋಜನೆಗಳಡಿ ಫಲಾನುಭವಿಗಳ ಸಂಖ್ಯೆ ನಿಗದಿಪಡಿಸಿ, ಗುರಿ ನೀಡಲಾಗಿದೆ. ಸರಕಾರದಿಂದ ಹಂತಹಂತವಾಗಿ ಅನುದಾನವೂ ಬಿಡುಗಡೆ ಆಗುತ್ತಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಅಧಿಕಾರಿಗಳು ಇಲಾಖಾ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಕ್ರಮಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಫೆಬ್ರವರಿ ತಿಂಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಫಲಾನುಭವಿಗಳ ಸಮಾವೇಶ ಮಾಡಲು ನಿರ್ದರಿಸಲಾಗಿದೆ. ತಹಶೀಲ್ದಾರ ಮತ್ತು ತಾಲೂಕಾ ಪಂಚಾಯತ ಇಓ ಅವರನ್ನು ನೊಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಉತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ಸಂಘಟಿಸಬೇಕು. ಜಿಲ್ಲಾಮಟ್ಟದ ಸಮಾವೇಶವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ಕಾರ್ಯಕ್ರಮಕ್ಕಾಗಿ ಅವರ ದಿನಾಂಕ ಕೇಳಲಾಗಿದೆ ಎಂದು ಸಚಿವರು ತಿಳಿಸಿದರು.
ಬರುವ ಜನವರಿ 31 ರಂದು ಕುಂದಗೋಳದಲ್ಲಿ, ಫೆಬ್ರವರಿ 2 ರಂದು ಹುಬ್ಬಳ್ಳಿಯಲ್ಲಿ ಮತ್ತು ಫೆಬ್ರವರಿ 5 ರಂದು ಧಾರವಾಡದಲ್ಲಿ ಗ್ಯಾರಂಟಿ ಸೇರಿದಂತೆ ವಿವಿಧ ಯೋಜನೆಗಳ ಪಲಾನುಭವಿಗಳ ಸಮಾವೇಶ ಸಂಘಟಿಸಲು ನಿರ್ಧರಿಸಲಾಗಿದೆ. ಆಯಾ ತಾಲೂಕಿನ ತಹಶೀಲ್ದಾರ ಮತ್ತು ಇಓ ಅವರ ನೇತೃತ್ವದಲ್ಲಿ ಸಮಾವೇಶದ ಸಿದ್ದತೆ ಆರಂಭಿಸಿ, ನಿಗದಿತ ದಿನಂಕಗಳಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಬೇಕು ಎಂದು ಸಚಿವರು ಸೂಚಿಸಿದರು.