ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿರುವ ಬೆನ್ನಲ್ಲೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಘರ್ ವಾಪ್ಸಿ ಬಗ್ಗೆ ಭಾರಿ ಚರ್ಚೆ ನಡೆದಿರುವಾಗಲೇ ಬಿಜೆಪಿಯಿಂದ ನನಗೆ ಬಹಳ ಒತ್ತಡವಿದೆ ಎಂದು ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಾನಂತು ಯಾವ ಕಾರಣಕ್ಕೂ ಮತ್ತೆ ಬಿಜೆಪಿಗೆ ಹೋಗಲ್ಲ ಎಂದಿದ್ದ ಮಾಜಿ ಡಿಸಿಎಂ, ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಇದೀಗ, ಬಿಜೆಪಿಗೆ ಬರುವಂತೆ ನನಗೆ ಬಹಳ ಒತ್ತಡ ಹಾಕುತ್ತಿದ್ದಾರೆ. ತಿರುಗಿ ಮಗ ಮನೆಗೆ ಬರಬೇಕು ಅಂತಾ ಬೇಡಿಕೆ ಇಟ್ಟಿದ್ದಾರೆ. ಆದರೆ ಯಾರು ಒತ್ತಡ ಹಾಕುತ್ತಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಲ್ಲ ಎಂದು ತಿಳಿಸಿದ್ದಾರೆ.
ಲಕ್ಷ್ಮಣ ಸವದಿ ದೈಹಿಕವಾಗಿ ಕಾಂಗ್ರೆಸ್ ನಲ್ಲಿದ್ದರೂ, ಮಾನಸಿಕವಾಗಿ ಬಿಜೆಪಿಯಲ್ಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಬೆನ್ನಲ್ಲೇ ಬಿಜೆಪಿಯಿಂದ ಒತ್ತಡವಿದೆ ಎಂಬ ಸವದಿ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.
ಅಲ್ಲದೇ ಎಲ್ಲಾ ಕಹಿ ಘಟನೆಗಳನ್ನು ಮರೆಯಬೇಕು ಅಂತಾನೂ ಹೇಳುತ್ತಿದ್ದಾರೆ. ಎಷ್ಟೇ ಒತ್ತಡವಿದ್ದರೂ ಬಿಜೆಪಿಗೆ ಹೋಗುವ ಆಲೋಚನೆ ನನಗೆ ಇಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಕಾಂಗ್ರೆಸ್ ನಿಂದ ಜನರು ಅಥಣಿಯಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ. ಹಿಂದಿಗಿಂತಲೂ ಅತಿ ಹೆಚ್ಚು ಮತಗಳಿಂದ ನಾನು ಗೆದ್ದಿದ್ದೇನೆ. ಹಾಗಾಗಿ ನಾನು ಮತ್ತೆ ಬಿಜೆಪಿಗೆ ಹೋಗುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದಿದ್ದಾರೆ.