ಬೆಂಗಳೂರು : ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಗೆ ‘ಭಾರತ ರತ್ನ’ ಪ್ರಶಸ್ತಿ ಘೋಷಣೆ ಮಾಡಿರುವುದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿರುವುದು ನನಗೆ ಅತೀವ ಸಂತಸ ಉಂಟುಮಾಡಿದೆ. ಎಪ್ಪತ್ತರ ದಶಕದಲ್ಲಿಯೇ ಕರ್ನಾಟಕದ ಮಾದರಿಯಲ್ಲಿ ಬಿಹಾರದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಕಲ್ಪಿಸಿದ್ದ ಕರ್ಪೂರಿ ಠಾಕೂರ್ ಅವರನ್ನು ‘’ಬಿಹಾರದ ದೇವರಾಜ ಅರಸು’’ ಎಂದು ಬಣ್ಣಿಸಲಾಗುತ್ತದೆ.
ಹಿಂದುಳಿದ ಸವಿತಾ ಸಮಾಜಕ್ಕೆ ಸೇರಿರುವ ಕರ್ಪೂರಿ ಠಾಕೂರ್ ಅವರು ಜಾತಿಗ್ರಸ್ತ ಬಿಹಾರ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇ ಅವರ ಜನಪ್ರಿಯತೆಗೆ ಸಾಕ್ಷಿ. ಭಾರತ ರತ್ನ ಪ್ರಶಸ್ತಿಗೆ ಅವರು ಅತ್ಯಂತ ಅರ್ಹರು. ಅವರಿಗೆ ನನ್ನ ಗೌರವಪೂರ್ವಕ ನಮನಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.