![](https://kannadadunia.com/wp-content/uploads/2023/04/dailymom-parent-portal-challenges-teachers-face11.jpg)
ಚಿತ್ರದುರ್ಗ : 12,000 ಪದವಿಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸುಪ್ರಿಂ ಕೋರ್ಟ್ ನೀಡಿದ ತಡೆಯಾಜ್ಞೆಯನ್ನು ಸೋಮವಾರ ತೆರವು ಗೊಳಿಸಲಾಗಿದೆ. ರಾಜ್ಯ ಅಡ್ವೊಕೇಟ್ ಜನರಲ್ ಬಳಿ ಅಭಿಪ್ರಾಯ ಪಡೆದು ನೇಮಕಾತಿ ಪ್ರಕ್ರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 43 ಸಾವಿರ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಯಂ ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 12,000 ಪದವಿಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸುಪ್ರಿಂ ಕೋರ್ಟ್ ನೀಡಿದ ತಡೆಯಾಜ್ಞೆಯನ್ನು ಸೋಮವಾರ ತೆರವು ಗೊಳಿಸಲಾಗಿದೆ. ರಾಜ್ಯ ಅಡ್ವೊಕೇಟ್ ಜನರಲ್ ಬಳಿ ಅಭಿಪ್ರಾಯ ಪಡೆದು ನೇಮಕಾತಿ ಪ್ರಕ್ರಿಯನ್ನು ಪೂರ್ಣಗೊಳಿಸಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ 11 ಶಿಕ್ಷಕರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು ಬಾಕಿಯಿದೆ ಎಂದು ತಿಳಿಸಿದರು.
ಗ್ಯಾರೆಂಟಿ ಯೋಜನೆಗಳ ಜಾರಿಯಿಂದ ರಾಜ್ಯ ದಿವಾಳಿಯಾಗುವುದು ಎಂದು ಟೀಕೆಗಳು ಕೇಳಿ ಬಂದಿದ್ದವು. ಆದರೆ ಇದಕ್ಕೆ ವಿರುದ್ಧವಾಗಿ ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಗಳು ಶೇ.92 ರಷ್ಟು ಅರ್ಹ ಜನರಿಗೆ ತಲುಪುತ್ತಿವೆ. ಶಕ್ತಿ ಯೋಜನೆಯಡಿ 150 ಕೋಟಿಗೂ ಅಧಿಕ ಮಹಿಳೆಯರು ರಾಜ್ಯದ ಬಸ್‍ಗಳಲ್ಲಿ ಉಚಿತವಾಗಿ ಸಂಚಾರ ಮಾಡಿದ್ದಾರೆ. ಗ್ಯಾರೆಂಟಿ ಯೋಜನೆಗಳು ಯಶಸ್ವಿಯಾಗಿವೆ ಎಂದು ಸಚಿವ ಮಧು ಬಂಗಾರಪ್ಪ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ಉಚಿತ ನೀಟ್ ತರಬೇತಿ ನೀಡಲು ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಖಾಸಗಿ ಕೋಚಿಂಗ್ ಸೆಂಟರ್‍ಗಳಿಗೆ ತೆರಳಿ ದುಬಾರಿ ಶುಲ್ಕ ನೀಡಿ ತರಬೇತಿ ಪಡೆಯುವುದು ತಪ್ಪಲಿದೆ. ಮುಖ್ಯಮಂತ್ರಿಗಳು ಅನುದಾನ ನೀಡುವ ಭರವಸೆ ಇದೆ ಎಂದು ಹೇಳಿದರು.