ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ವೈಭವವನ್ನು ನೋಡಿ ಇಡೀ ಜಗತ್ತೇ ಪುನೀತವಾಗಿದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ದೇಶದ ವಿವಿಧ ಮೂಲೆಗಳಿಂದ ಬಂದ ಅತಿಥಿಗಳು ಭಾಗವಹಿಸಿದ್ದರು. ರಾಜಕೀಯ ವ್ಯಕ್ತಿಗಳಿಂದ ಹಿಡಿದು ಬಾಲಿವುಡ್ ತಾರೆಯರು, ಉದ್ಯಮಿಗಳು ಮತ್ತು ಸಂತರ ದಂಡೇ ಅಯೋಧ್ಯೆಯಲ್ಲಿ ನೆರೆದಿತ್ತು. ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಇಡೀ ಕುಟುಂಬ ಸಮೇತ ಆಗಮಿಸಿ ರಾಮಮಂದಿರದ ದರ್ಶನ ಪಡೆದಿದ್ದಾರೆ.
ಅಂಬಾನಿ ಕುಟುಂಬ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 2.51 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಯೂ ಹೊರಬಿದ್ದಿದೆ. ಮುಖೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಮಗಳು ಇಶಾ ಮತ್ತು ಅಳಿಯ ಆನಂದ್ ಪಿರಾಮಲ್, ಪುತ್ರರಾದ ಆಕಾಶ್ ಮತ್ತು ಅನಂತ್, ಸೊಸೆ ಶ್ಲೋಕಾ ಮೆಹ್ತಾ ಹಾಗೂ ರಾಧಿಕಾ ಮರ್ಚೆಂಟ್ ಹೀಗೆ ಸಂಪೂರ್ಣ ಫ್ಯಾಮಿಲಿ ಅಯೋಧ್ಯೆಗೆ ಆಗಮಿಸಿತ್ತು. ಇದುವರೆಗೆ ಒಟ್ಟಾರೆ ಅಂಬಾನಿ ಕುಟುಂಬ ರಾಮಮಂದಿರ ನಿರ್ಮಾಣಕ್ಕಾಗಿ 10 ಕೋಟಿ ರೂಪಾಯಿ ದೇಣಿಗೆ ನೀಡಿದೆ ಎಂದು ಹೇಳಲಾಗ್ತಿದೆ.
ಸೂರತ್‌ನ ಉದ್ಯಮಿ ದಿಲೀಪ್ ಕುಮಾರ್ ಲಾಖಿ 101 ಕೆಜಿ ಚಿನ್ನವನ್ನು ರಾಮಮಂದಿರಕ್ಕೆ ದಾನ ಮಾಡಿದ್ದಾರೆ. ಈ ಚಿನ್ನವನ್ನು ಬಾಗಿಲು, ತ್ರಿಶೂಲ ಮತ್ತು ಡಮರುಗಳಲ್ಲಿ ಬಳಸಲಾಗಿದೆ. ಗುಜರಾತ್‌ನ ವಜ್ರದ ಉದ್ಯಮಿ ಗೋವಿಂದಭಾಯ್ ಧೋಲಾಕಿಯಾ ಅವರು ರಾಮಮಂದಿರ ನಿರ್ಮಾಣಕ್ಕೆ 11 ಕೋಟಿ ರೂಪಾಯಿ ನೀಡಿದ್ದಾರೆ.
ಆದರೆ ರಾಮಮಂದಿರ ನಿರ್ಮಾಣಕ್ಕೆ ಗೌತಮ್ ಅದಾನಿ ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಅವರು ದೇಣಿಗೆ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಕೂಡ ಸ್ಪಷ್ಟವಾಗಿಲ್ಲ. ವರದಿಯ ಪ್ರಕಾರ ಅದಾನಿ ಗ್ರೂಪ್ ಕಂಪನಿಯಾದ ಅದಾನಿ ವಿಲ್ಮಾರ್ ಫಾರ್ಚೂನ್ ಬ್ರಾಂಡ್‌ನೊಂದಿಗೆ ಪ್ರಸಾದವನ್ನು ಸಮರ್ಪಣಾ ಸಮಾರಂಭಕ್ಕೆ ಸಿದ್ಧಪಡಿಸಿದೆ.
ಅನೇಕ ಇತರ ದೇವಾಲಯಗಳಿಂದ ಕೂಡ ರಾಮಮಂದಿರಕ್ಕಾಗಿ ಹಣ ಹರಿದು ಬಂದಿದೆ. ಪಾಟ್ನಾದ ಮಹಾವೀರ ಮಂದಿರದ ವತಿಯಿಂದ ರಾಮ ಮಂದಿರ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ನೀಡಲಾಗಿದೆ.