ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಲಾಲ್ ಬಹದ್ದೂರ್ ಶಾಸ್ತ್ರಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ದಶಮಾನೋತ್ಸವ, ಅಯೋಧ್ಯೆ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಜನವರಿ 22ರ ಸೋಮವಾರ ಗುಳೇದಗುಡ್ಡದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಮಗುವಿಗೆ 5000 ಠೇವಣಿ ಇಡುವುದಾಗಿ ಹೇಳಲಾಗಿತ್ತು.
ಅಂತೆಯೇ ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಆರು ಮಕ್ಕಳ ಹೆಸರಲ್ಲಿ ತಲಾ 5,000 ಠೇವಣಿ ಇಡಲಾಗಿದೆ ಎಂದು ಸಂಘದ ಅಧ್ಯಕ್ಷ ರಾಜು ತಾಪಡಿಯಾ ತಿಳಿಸಿದ್ದಾರೆ.
ಪ್ರತಿ ಮಗುವಿಗೆ 5000 ರೂ. ಹಣ ನೀಡಿದರೆ ಅದು ಉಳಿಯುವುದಿಲ್ಲ. ಅದನ್ನು ಠೇವಣಿ ಇಟ್ಟರೆ 18 ವರ್ಷದ ನಂತರ 25,000 ರೂ. ಸಿಗಲಿದ್ದು, ಮಗುವಿನ ಶಿಕ್ಷಣಕ್ಕೆ ನೆರವಾಗುತ್ತದೆ. ಹೀಗಾಗಿ ಹಣವನ್ನು ಠೇವಣಿ ಇಡಲಾಗಿದೆ ಎಂದು ಹೇಳಿದ್ದಾರೆ
ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ನಾಗರಾಜ ಕುರಿ ಅವರು, ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ದಿನ ಸೋಮವಾರ ಆರು ಮಕ್ಕಳು ಜನಿಸಿವೆ ಎಂದು ತಿಳಿಸಿದ್ದಾರೆ.