ಮುಂಬೈ: ಸನಾತನ ಯಾತ್ರೆ ಮೇಲೆ ಏಕಾಏಕಿ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಧಾರ್ಮಿಕ ದ್ವಜವನ್ನು ಹರಿದು ಹಾಕಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಮ ಭಕ್ತರು ಸನಾತನ ಮೆರವಣಿಗೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಮುಂಬೈನ ಭಾಯಂದರ್ ನಲ್ಲಿ ನಡೆಯುತ್ತಿದ್ದ ಸನಾತನ ಧರ್ಮ ಯಾತ್ರೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಸನಾತನ ಧರ್ಮ ಯಾತ್ರೆ ಆರಂಭವಾಗುತ್ತಿದ್ದಂತೆ ಗಲಾಟೆ ನಡೆದಿದೆ. ರಾಮ ಭಕ್ತರು ತಮ್ಮ ತಮ್ಮ ಕಾರಿನಲ್ಲಿ ರಾಮ ಹಾಗೂ ಹನುಮನ ಧ್ವಜಗಳೊಂದಿಗೆ ಸಾಗುತ್ತಿದ್ದ ವೇಳೆ ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ದೊಣ್ಣೆಗಳನ್ನು ಹಿಡಿದು ಬಂದ ದುಷ್ಕರ್ಮಿಗಳು ಕಾರುಗಳ ಮೇಲೆ ದಾಳಿ ನಡೆಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಗಲಾಟೆಯನ್ನು ತಡೆದಿದ್ದಾರೆ. ಯಾತ್ರೆ ವೇಳೆ ಹಲವು ಮಹಿಳೆಯರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ದಾಳಿ ಕೋರರನ್ನು ಬಂಧಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.