ಮಂಡ್ಯ: ಹೊಯ್ಸಳರ ಕಾಲದ ಶಿಲಾ ಶಾಸನವೊಂದು ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮಾಚಲಘಟ್ಟ ಕುಗ್ರಾಮದ ಮಲ್ಲೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಶಾಸನಗಳು ಹಾಗೂ ರೇಖಾಚಿತ್ರಗಳು ಇರುವ ಅಪರೂಪದ ಕಲ್ಲಾಗಿದ್ದು, ತಜ್ಞರ ಪ್ರಕಾರ ಇದು 16ನೇ ಶತಮಾನದ ಶಿಲಾ ಶಾಸನವಾಗಿದೆ. ದುಷ್ಟಶಕ್ತಿಗಳನ್ನು ಗ್ರಾಮದಿಂದ ದೂರವಿಡಲು ಇದನ್ನು ಸ್ಥಾಪಿಸಲಾಗಿದೆ.
ಕಲ್ಲಿನ ಮೇಲೆ ರೇಖೆಗಳನ್ನು ಕೆತ್ತಲಾಗಿದ್ದು, ಬರಹಗಳು ಮೋದಿ ಲಿಪಿಯಲ್ಲಿವೆ. ಶಿಲೆಯ ಅರ್ಧ ಭಾಗ ಮಾತ್ರ ಪತ್ತೆಯಾಗಿದೆ. ಇನ್ನರ್ಧ ಭಾಗ ಭೂಮಿಯಲ್ಲಿ ಹುದುಗಿರಬಹುದು ಎನ್ನಲಾಗಿದೆ. ಪ್ರೀಮಿಯರ್ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ ನ ಶಾಸ್ತ್ರೀಯ ಭಾಷಾ ತಜ್ಞರು ಈ ಶಿಲೆಯ ಬಗ್ಗೆ ಅಧ್ಯಯನ ನಡೆಸಿದ್ದಾರೆ.
ಈ ಶಿಲೆಯಲ್ಲಿ ಮೇಲ್ಭಾಗದಲ್ಲಿ ದೇವತೆಯ ರೇಖಾಚಿತ್ರವಿದೆ. ಕೆಳಭಾಗದಲ್ಲಿ ವಾಸ್ತುಮಂಡಲಗಳ ರೇಖಾಚಿತ್ರವಿದೆ. ಕೆಳಭಾಗದಲ್ಲಿ ಒಟ್ಟು 20 ಮನೆಗಳ ಚಿತ್ರವಿದೆ. ಓಂ ಹಾಗೂ ಹ್ರೀಂ ನಂತಹ ಬೀಜ ಮಂತ್ರಗಳಿವೆ. ರಜೋಗುಣ, ತಮೋಗುಣ ಹಾಗೂ ಸತ್ವಗುಣ ಸಂಕೇತಿಸುವ ತ್ರಿಶೂಲಗಳನ್ನು ಅದರ ಸುತ್ತಲು ಕೆತ್ತಲಾಗಿದೆ. ಕಲ್ಲಿನ ಮೇಲ್ಭಾಗದಲ್ಲಿ ಸೂರ್ಯ ಹಾಗೂ ಚಂದ್ರನ ರೇಖಾಚಿತ್ರಗಳಿವೆ ಎಂದು ತಜ್ಞರು ವಿವರಿಸಿದ್ದಾರೆ.