ಬೆಂಗಳೂರು: ಮಾಜಿ ಸಚಿವ, ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಸೌಭಾಗ್ಯಲಕ್ಷ್ಮೀ ಶುಗರ್ಸ್ ಕಾರ್ಖಾನೆ ಹೆಸರಲ್ಲಿ ಸಾಲ ಪಡೆದಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಆದೇಶ ನೀಡಿದೆ.
ಗೋಕಾಕ್ ನ ಸೌಭಾಗ್ಯಲಕ್ಷ್ಮೀ ಶುಗರ್ಸ್ ಕಂಪನಿ ಪ್ರೈ.ಲಿ. ಹೆಸರಲ್ಲಿ ಚಾಮರಾಜಪೇಟೆಯಲ್ಲಿರುವ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಂದ ಸಾಲ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.
ಸೌಭಾಗ್ಯಲಕ್ಷ್ಮೀ ಶುಗರ್ಸ್ ಕಾರ್ಖಾನೆ ಸ್ಥಾಪನೆ, ವಿಸ್ತರಣೆ, ನಿರ್ವಹಣೆಗಾಗಿ 2013ರಿಂದ 2017ರವರೆಗೆ 232 ಕೋಟಿ 88 ಲಕ್ಷ ಸಾಲ ಪಡೆದಿದ್ದರು. 2023ರ ವೇಳೆಗೆ 439 ಕೋಟಿ 7 ಲಕ್ಷ ಸಾಲ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ರಾಜಣ್ಣ ವಿವಿಪುರಂ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ವಸಂತ್ ವಿ.ಪಾಟೀಲ್, ಶಂಕರ್ ಪಾವಡೆ ಹಾಗೂ ಇಬ್ಬರು ಪದಾಧಿಕಾರಿಗಳ ವಿರುದ್ಧ ವಿವಿಪುರಂ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.