ನಟಿ ನಯನತಾರಾ ಅವರ ಚಿತ್ರ ‘ಅನ್ನಪೂರ್ಣಿ’ ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿತ್ತು. ಚಿತ್ರದಲ್ಲಿನ ರಾಮನೂ ಮಾಂಸಾಹಾರ ಸೇವನೆ ಮಾಡಿದ್ದ ಎಂಬ ಡೈಲಾಗ್ ಸೇರಿದಂತೆ ಹಲವು ದೃಶ್ಯಗಳು ವಿವಾದ ಸೃಷ್ಟಿ ಮಾಡಿತ್ತು. ಈ ವಿಚಾರ ರಾಮನ ಭಕ್ತರ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಒಟಿಟಿಯಿಂದ ತೆಗೆದುಹಾಕಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಭಗವಂತ ರಾಮನ ಬಗ್ಗೆ ವಿವಾದಾತ್ಮಕ ಸಂಭಾಷಣೆ ಬಗ್ಗೆ ಕೊನೆಗೂ ಮೌನ ಮುರಿದ ನಯನತಾರಾ ಕ್ಷಮೆಯಾಚಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ನಟಿ ನಯನತಾರಾ ಮೊದಲು ‘ಜೈ ಶ್ರೀ ರಾಮ್’ ಎಂದು ಬರೆಯುತ್ತಾ, ಪಾಸಿಟಿವ್ ಸಂದೇಶವನ್ನು ಹಂಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನದಲ್ಲಿ, ನಾವು ಪರೋಕ್ಷವಾಗಿ ನೋವನ್ನುಂಟು ಮಾಡಿರಬಹುದು” . ಈ ಹಿಂದೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾದ ಸೆನ್ಸಾರ್ ಮಾಡಲಾದ ಚಲನಚಿತ್ರವನ್ನು ಒಟಿಟಿ ಪ್ಲಾಟ್ಫಾರ್ಮ್ನಿಂದ ತೆಗೆದುಹಾಕಲಾಗುವುದು ಎಂದು ನಾವು ನಿರೀಕ್ಷಿಸಿರಲಿಲ್ಲ, ಸಿನಿಮಾ ಮಾಡುವುದು ಎಂದರೆ ಕೇವಲ ಆರ್ಥಿಕ ಲಾಭಕ್ಕೆ ಮಾತ್ರವಲ್ಲ ಸಮಾಜಕ್ಕೆ ಒಂದು ಸಂದೇಶ ತಿಳಿಸುವ ಉದ್ದೇಶವೂ ಇರುತ್ತದೆ.
ನಮ್ಮ ಜೀವನದಲ್ಲಿ ಏನು ನಡೆಯುತ್ತಿದೆಯೋ ಅದನ್ನೇ ತೋರಿಸುವುದೇ ಈ ಸಿನಿಮಾ ಉದ್ದೇಶ, ನಿಮ್ಮ ಭಾವನೆಗಳಿಗೆ ನೋವುಂಟು ಮಾಡಿದ ಎಲ್ಲ ಜನರಲ್ಲಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ನಟಿ ಬರೆದುಕೊಂಡಿದ್ದಾರೆ. ಬಹಿರಂಗ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ನಟಿ ನಯನತಾರಾ ಕ್ಷಮೆಯಾಚಿಸಿದ್ದಾರೆ.