ಮಕ್ಕಳಿಗೆ ಹೋಮ್ ವರ್ಕ್ ಮಾಡಿಸೋದು ಪಾಲಕರಿಗೆ ತಲೆನೋವಿನ ಕೆಲಸ. ಒಂದು ಹತ್ತು ನಿಮಿಷದಲ್ಲಿ ಆಗುವ ಹೋಮ್ ವರ್ಕ್ ಒಂದು ಗಂಟೆಯಾದ್ರೂ ಪೂರ್ಣಗೊಂಡಿರೋದಿಲ್ಲ.
ಒಮ್ಮೆ ಪೆನ್ಸಿಲ್ ಹುಡುಕಾಟ, ಇನ್ನೊಮ್ಮೆ ಪೆನ್ಸಿಲ್ ಶಾರ್ಪ್ ಮಾಡುವ ಕೆಲಸ ಮತ್ತೊಮ್ಮೆ ಬುಕ್ ಹುಡುಕುವ ಕೆಲಸದಲ್ಲೇ ಮಕ್ಕಳು ಟೈಂ ಹಾಳು ಮಾಡ್ತಾರೆ. ಒಂಭತ್ತು ವರ್ಷದ ಮಗನ ಈ ಕೆಲಸಕ್ಕೆ ಬೇಸತ್ತಿದ್ದ ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಝಾಂಗ್ ಎಂಬ ಮಹಿಳೆ ಹೊಸ ಮಾರ್ಗ ಅನುಸರಿಸಿದ್ದಾಳೆ.
ಝಾಂಗ್ ಮಗ ಹೋಮ್ ವರ್ಕ್ ಮಾಡ್ತಿದ್ದ ವೇಳೆ ಡೌಯಿನ್ ಖಾತೆಯಲ್ಲಿ ಲೈವ್ ಬಂದಿದ್ದಾಳೆ. ಮಗ ಹೋಮ್ ವರ್ಕ್ ಮಾಡೋದನ್ನು 900ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮಗ ಹೋಮ್ ವರ್ಕ್ ಮಾಡೋದನ್ನು ನಾನು ಚೆಕ್ ಮಾಡುವ ಅವಶ್ಯಕತೆ ಇರಲಿಲ್ಲ. ಅವರೆಲ್ಲ ಲೈವ್ ನೋಡ್ತಿದ್ದ ಕಾರಣ ನಾನು ಬೇರೆ ಕೆಲಸ ಮಾಡಿಕೊಳ್ತಿದ್ದೆ ಎನ್ನುವ ಝಾಂಗ್, ಈ ಟ್ರಿಕ್ಸ್ ವರ್ಕ್ ಆಗಿದೆ ಎನ್ನುತ್ತಾಳೆ.
ಜನರು ನನ್ನನ್ನು ನೋಡ್ತಿದ್ದಾರೆ ಎನ್ನುವ ಕಾರಣಕ್ಕೆ ಮಗ ಮೊದಲಿಗಿಂತ ಮೂರು ಪಟ್ಟು ವೇಗವಾಗಿ ಹೋಮ್ ವರ್ಕ್ ಮಾಡಿದ್ದಾನೆ. ಒಂದು ವಾರದಿಂದ ಹಾಗೆ ಉಳಿದಿದ್ದ ಹೋಮ್ ವರ್ಕ್, ಕೆಲವೇ ಗಂಟೆಗಳಲ್ಲಿ ಮುಗಿದಿದೆ ಎಂದು ಝಾಂಗ್ ಹೇಳಿದ್ದಾಳೆ.
ಡೌಯಿನ್ ಖಾತೆಯಲ್ಲಿ ಮಕ್ಕಳ ಮುಖ ತೋರಿಸುವಂತಿಲ್ಲ. ಹಾಗಾಗಿ ಝಾಂಗ್ ಬರೀ ಹೋಮ್ ವರ್ಕ್ ಮಾಡಿದ್ದ ಆತನ ಕೈ ಮಾತ್ರ ತೋರಿಸಿದ್ದಾಳೆ. ಅನೇಕರು ಝಾಂಗ್ ಕೆಲಸವನ್ನು ಮೆಚ್ಚಿದ್ದಾರೆ. ಮತ್ತೆ ಕೆಲವರು ಇದು ತಪ್ಪು ಎಂದಿದ್ದಾರೆ.