ಧಾರವಾಡ: ನೀಲಗಿರಿ ಗಿಡ ಬೆಳೆಸಿದಂತೆ ವಿಧಿಸಿದ ನಿಷೇಧ ರದ್ದುಪಡಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ.
ಕಾಗದ ಉದ್ದಿಮೆಗೆ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ನೀಲಗಿರಿ ಗಿಡ ಕೃಷಿ ಮತ್ತು ಏಕ ಅರಣ್ಯ ಸಂಸ್ಕೃತಿ ಬಗ್ಗೆ ಈ ಹಿಂದೆ ಸರ್ಕಾರ ಕೈಗೊಂಡ ಕ್ರಮ ವಿರೋಧಿಸಿ ನೆಡದಿರಿ ನೀಲಗಿರಿ ಅಭಿಯಾನ ನಡೆಸಲಾಗಿತ್ತು. ಸುಪ್ರೀಂ ಕೋರ್ಟ್ ನಲ್ಲಿ ಸಮಾಜ ಪರಿವರ್ತನಾ ಸಮುದಾಯದಿಂದ ಪಿಐಎಲ್ ದಾಖಲಿಸಿದ್ದು, ನೀಲಗಿರಿ ಮರಗಳ ಕೃಷಿ ಮತ್ತು ಶೀಘ್ರವಾಗಿ ಬೆಳೆಯುವ ಮರಗಳ ಏಕಾಕಾರಿ ಅರಣ್ಯ ಸಂಸ್ಕೃತಿ ನಿಷೇಧಿಸಿ ಕೋರ್ಟ್ ಆದೇಶ ಹೊರಡಿಸಿತ್ತು ಎಂದು ಹೇಳಿದ್ದಾರೆ.
ನೀಲಗಿರಿ ಗಿಡಗಳು ಬೆಳೆಯುವುದರಿಂದ ಭೂಮಿಗೆ ತೀವ್ರತರ ಅಪಾಯವಾಗಲಿದ್ದು, ಇದನ್ನು ಕೈ ಬಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಮನವಿ ಸ್ಪಂದಿಸದಿದ್ದರೆ ಕೋರ್ಟ್ ಮೆಟ್ಟಿಲೇರಲಾಗುವುದು ಎಂದು ಹೇಳಿದ್ದಾರೆ.