ರಾಮನಗರ: ಅಯೋಧ್ಯೆಯಲ್ಲಿ ರಾಮ ಮಂದಿರ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಆಗಲೇ ರಾಜಕೀಯ ಉದ್ದೇಶಕ್ಕೆ ಉದ್ಘಾಟನೆ ಮಡಲು ಹೊರಟಿದ್ದಾರೆ. ಈ ರಾಜಕೀಯ ಕಾರ್ಯಕ್ರಮಕ್ಕೆ ನಾವು ಹೋಗಬೇಕಾ? ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಪ್ರಶ್ನಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ, ರಾಮ ಮಂದಿರ ರಾಜಕೀಯ ಸ್ವತ್ತಲ್ಲ. ಆದರೆ ಬಿಜೆಪಿಯವರು ಇದನ್ನು ರಾಜಕೀಯಕ್ಕೆ ಬಳಿಸಿಕೊಳ್ಳುತ್ತಿದ್ದಾರೆ. ಮನೆ ಮನೆಗೆ ಹೋಗಿ ಮಂತ್ರಾಕ್ಷತೆ ಕೊಡುತ್ತಿದ್ದಾರೆ. ನಾವು ಗೃಹಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಮಂತ್ರಾಕ್ಷತೆ ಕೊಟ್ಟವರಿಗೆ ಮತ ಹಾಗಬೇಕಾ ಅಥವಾ ಯಜಮಾನಿಯರಿಗೆ 2000 ರೂಪಾಯಿ ಹಣ ನೀಡಿದವರಿಗೆ ಮತ ಹಾಕಬೇಕಾ? ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.
ನಾವೂ ಕೂಡ ರಾಮ ಮಂದಿರ ಕಟ್ಟಲು ಜಾಗ ಹುಡುಕುತ್ತಿದ್ದೇವೆ. 20 ಎಕರೆ ಜಾಗದಲ್ಲಿ ಮಂದಿರ ಕಟ್ಟುತ್ತಿದ್ದೇವೆ. ರಾಮ ಮಂದಿರವನ್ನು ಅದ್ಧೂರಿಯಾಗಿ ನಿರ್ಮಿಸುತ್ತೇವೆ. ರಾಮ ಮಂದಿರ ಬಿಜೆಪಿ ಅಥವಾ ಕಾಂಗ್ರೆಸ್ ಯಾವ ಪಕ್ಷದ ಸ್ವತ್ತಲ್ಲ. ಅದು ಈ ಸಮಾಜದ ಸ್ವತ್ತು. ರಾಮ ಮಂದಿರ ನಿರ್ಮಾಣಕ್ಕೆ ನಾವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದು, ಜಿಲ್ಲಾಧಿಕಾರಿಗಳು, ಸಂಸದರು ಇದರ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಹೇಳಿದರು.