ಹೃದಯಾಘಾತದ ನಂತರ ಅನೇಕರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆಂಜಿಯೋಪ್ಲಾಸ್ಟಿ, ವಾಲ್ವ್ ರಿಪೇರಿ ಮತ್ತು CABG ಯಂತಹ ಸರ್ಜರಿಗಳನ್ನು ಮಾಡಲಾಗುತ್ತದೆ. ಹೃದಯ ಶಸ್ತ್ರಚಿಕಿತ್ಸೆಯ ನಂತರ ರೋಗಿಗಳ ಅಸಡ್ಡೆಯಿಂದಾಗಿ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಹೃದ್ರೋಗಿಗಳು ತಜ್ಞ ವೈದ್ಯರ ಕೆಲವು ಸಲಹೆಗಳನ್ನು ಪಾಲಿಸಬೇಕು.
ನಿಯಮಿತವಾಗಿ ಹೃದಯ ಬಡಿತ, ಬಿಪಿ, ಶುಗರ್ ಪರೀಕ್ಷಿಸಿ
ಹೃದ್ರೋಗಿಗಳು ತಮ್ಮ ಹೃದಯ ಬಡಿತ, ರಕ್ತದ ಸಕ್ಕರೆ ಮಟ್ಟ ಮತ್ತು ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲಿಸಬೇಕು. ವಿಪರೀತ ಏರಿಳಿತಗಳಿದ್ದಲೆ ಕೂಡಲೇ ವೈದ್ಯರೊಂದಿಗೆ ಮಾತನಾಡಿ.
ಹೃದಯ ಶಸ್ತ್ರಚಿಕಿತ್ಸೆಯ ಛೇದನದ ಆರೈಕೆಯಲ್ಲಿ ಯಾವುದೇ ಅಜಾಗರೂಕತೆ ಇರಬಾರದು. ಗಾಯ ಮಾಯುವವರೆಗೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಈ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ಅದನ್ನು ಒಣಗಿಸಿ. ಗಾಯವಿರುವ ಸ್ಥಳದ ಸುತ್ತ ಕೆಂಪಗಾಗಿದ್ದರೆ, ನೋವು ಅಥವಾ ಊತ ಕಂಡುಬಂದರೆ ಅದನ್ನು ನಿರ್ಲಕ್ಷಿಸಬೇಡಿ.
ತೂಕವನ್ನು ಪರೀಕ್ಷಿಸಿಕೊಳ್ಳಿ
ಹೃದ್ರೋಗಿಗಳು ತೂಕವನ್ನು ಆಗಾಗ ಪರೀಕ್ಷಿಸಿಕೊಳ್ಳಬೇಕು. ದೇಹದಲ್ಲಿ ಊತ ಅಥವಾ ಹಠಾತ್ ತೂಕ ಹೆಚ್ಚಾಗುವುದು ಕಂಡುಬಂದರೆ ನಿರ್ಲಕ್ಷ ಬೇಡ. ಇದು ನೀರಿನ ಸಂಗ್ರಹದ ಲಕ್ಷಣವೂ ಆಗಿರಬಹುದು.
ಹೃದಯದ ಶಸ್ತ್ರಚಿಕಿತ್ಸೆಯ ನಂತರ ಜೀವನಶೈಲಿ, ಆಹಾರ ಮತ್ತು ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವೈದ್ಯರು ನಿಷೇಧಿಸಿದ ಆಹಾರಗಳನ್ನ ಸೇವಿಸಬೇಡಿ. ವೈದ್ಯರು ಸೂಚಿಸಿದ ಎಲ್ಲಾ ಸಲಹೆಗಳನ್ನೂ ಪಾಲಿಸಬೇಕು. ಜೀವನಶೈಲಿ ಬದಲಾವಣೆ ಮತ್ತು ವ್ಯಾಯಾಮಕ್ಕೆ ಗಮನ ಕೊಡಿ.
ಔಷಧಿಗಳು
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ವೈದ್ಯರು ನೀಡುವ ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ. ಇದು ರಕ್ತದೊತ್ತಡವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ ಮತ್ತು ರಕ್ತವನ್ನು ತೆಳ್ಳಗಾಗಿಸುತ್ತದೆ. ಇದರಿಂದಾಗಿ ರಕ್ತ ಪರಿಚಲನೆಯು ಸರಿಯಾಗಿರುತ್ತದೆ, ಹೃದಯಾಘಾತದ ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.