ಬೆಂಗಳೂರು: ಜೆಇಇ ಪರೀಕ್ಷೆ ನಡೆಯುತ್ತಿರುವ ದಿನಾಂಕಗಳಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ನಡೆಸದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಲೇಜುಗಳಿಗೆ ಸೂಚನೆ ನೀಡಿದೆ.
2024ರ ಜೆಇಇ ಮುಖ್ಯ ಪರೀಕ್ಷೆಯ ಮೊದಲ ಹಂತದ ಪರೀಕ್ಷೆಗಳು ಜನವರಿ 24 ರಿಂದ ಫೆಬ್ರವರಿ 1ರವರೆಗೆ ನಡೆಯಲಿವೆ. ಈ ದಿನಗಳಂದು ಇರುವ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಮುಂದೂಡುವಂತೆ ಮನವಿ ಬಂದ ಹಿನ್ನೆಲೆಯಲ್ಲಿ ಮಂಡಳಿ ನಿಗದಿಪಡಿಸಿರುವ ಜನವರಿ 27ರಿಂದ ಫೆಬ್ರವರಿ 17ರ ಅವಧಿಯೊಳಗೆ ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.
ಪ್ರಥಮ ಪಿಯುಸಿ ಪ್ರಾಯೋಗಿಕ ಪರೀಕ್ಷೆಯನ್ನು ಕಾಲೇಜು ಹಂತದಲ್ಲಿ ನಡೆಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 80 ಅಂಕಗಳಿಗೆ ಪರೀಕ್ಷೆ ನಡೆಸುವಂತೆ ಪ್ರಾಂಶುಪಾಲರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚಿಸಿದೆ. ಪ್ರಥಮ ಪಿಯುಸಿಗೆ 80 ಅಂಕಗಳ ಪ್ರಶ್ನೆ ಪತ್ರಿಕೆಗೆ ಪರೀಕ್ಷೆ ನಡೆಸಿ 100 ಅಂಕಗಳಿಗೆ ಸ್ಕೇಲ್ ಅಪ್ ಮಾಡಿ ಅಂಕಗಳನ್ನು ಸ್ಯಾಟ್ಸ್ ಮೂಲಕ ಅಪ್ಲೋಡ್ ಮಾಡಲು ತಿಳಿಸಲಾಗಿದೆ.