ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಯುವತಿ ಎದುರು ಅಸಭ್ಯ ವರ್ತನೆ ತೋರಿದ ಘಟನೆ ನಡೆದಿದೆ. ಬೆಂಗಳೂರಿನ ಮಹದೇವಪುರದ ಪಾರ್ಕಿನ ಸರ್ವಿಸ್ ರಸ್ತೆಯಲ್ಲಿ ಯುವಕನೊಬ್ಬ ಯುವತಿ ಎದುರು ಹಸ್ತಮೈಥುನ ಮಾಡಿಕೊಂಡಿದ್ದಾನೆ.
ಕಾರ್ ಪಾರ್ಕ್ ಮಾಡಿ ಕಾರ್ ನಲ್ಲಿ ಯುವತಿ ಕುಳಿತುಕೊಂಡಿದ್ದ ವೇಳೆ ಕಾರ್ ನ ಮುಂಭಾಗದಲ್ಲಿ ಯುವಕ ಹಸ್ತಮೈಥುನ ಮಾಡಿಕೊಂಡು ಅಸಭ್ಯ ವರ್ತನೆ ತೋರಿದ್ದು, ಹೆದರಿಕೆಯಿಂದ ಯುವತಿ ಕಾರ್ ಡೋರ್ ಲಾಕ್ ಮಾಡಿಕೊಂಡಿದ್ದಾರೆ. ಆ ನಂತರ ಕಾರ್ ಬಳಿ ಬಂದ ಅಪರಿಚಿತ ಕಾರ್ ಸುತ್ತಲೂ ಓಡಾಡಿದ್ದಾನೆ. ನಂತರ ಬೆದರಿಕೆ ಹಾಕುವ ದೃಷ್ಟಿಯಲ್ಲಿ ಯುವತಿಯನ್ನು ನೋಡಿದ್ದಾನೆ.
ಇದರಿಂದ ತಪ್ಪಿಸಿಕೊಳ್ಳಲು ಯುವತಿ ಸ್ಟಿಯರಿಂಗ್ ಕೆಳಗೆ ಅವಿತುಕೊಂಡಿದ್ದಾಳೆ. ಆಕೆಯ ಸ್ನೇಹಿತರೊಬ್ಬರು ಬಂದ ನಂತರ ಕಾರ್ ನಿಂದ ಕೆಳಗೆ ಇಳಿದಿದ್ದಾಳೆ. ಟ್ವೀಟ್ ನಲ್ಲಿ ತಾನು ಅನುಭವಿಸಿದ ಸಮಸ್ಯೆ ಬಗ್ಗೆ ಯುವತಿ ಮಾಹಿತಿ ಹಂಚಿಕೊಂಡಿದ್ದಾರೆ. ಜನವರಿ 5ರಂದು ಮಹದೇವಪುರದಲ್ಲಿ ಘಟನೆ ನಡೆದಿದೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಮಹದೇವಪುರ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.