ನವದೆಹಲಿ: 2002ರಲ್ಲಿ ನಡೆದಿದ್ದ ಬಿಲ್ಕಿಸ್ ಬಾನು ಅತ್ಯಾಚಾರ ಹಾಗೂ ಆಕೆಯ ಮಗು ಮತ್ತು ಕುಟುಂಬದವರನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ನಲ್ಲಿ ಭಾರಿ ಹಿನ್ನಡೆಯಾಗಿದೆ.
ಪ್ರಕರಣ ಸಂಬಂಧ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿ ಇದೀಗ ಪ್ರಕರಣದ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಅಪರಾಧಿಗಳ ಬಿಡುಗಡೆ ರದ್ದು ಮಾಡಿದ್ದು, ಮತ್ತೆ ಜೈಲಿಗೆ ಕಳುಹಿಸುವಂತೆ ಸೂಚಿಸಿದೆ.
ಗುಜರಾತ್ ಸರ್ಕಾರ ಈ ಪ್ರಕರಣದಲ್ಲಿ 11 ಅಪರಾಧಿಗಳನ್ನು ಬಿಡಿಗಡೆ ಮಾಡಿದ್ದು ಸರಿಯಲ್ಲ. ಈ ವಿಚಾರ ಮಹಾರಾಷ್ಟ್ರ ಸರ್ಕಾರಕ್ಕೆ ಬಿಟ್ಟದ್ದು. ಬಿಡುಗಡೆ ಆದೇಶದಲ್ಲಿ ಸಾಮರ್ಥ್ಯದ ಕೊರತೆ ಇದೆ. ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸಿ. ಅರ್ಜಿ ವಿಚಾರಣೆ ಕೂಡ ಮುಂದುವರೆಯಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ 11 ಆರೋಪಿಗಳು, ಅವರ ಮಗುವನ್ನು ಹಾಗೂ ಕುಟುಂಬ ಸದಸ್ಯರನ್ನು ಬರ್ಬರವಾಗಿ ಹತ್ಯೆಗೈದಿದ್ದರು. ಈ ಪ್ರಕರಣದ ಅಪರಾಧಿಗಳಿಗೆ ಜೈಲುಶಿಕ್ಷೆಯಾಗಿತ್ತು. ಆದರೆ ಗುಜರಾತ್ ಸರ್ಕಾರ 2022ರಂದು ಸ್ವಾತಂತ್ರ್ಯ ದಿನಾಚರಣೆ ದಿನ 11 ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಅಪರಾಧಿಗಳ ಬಿಡುಗಡೆ ವೇಳೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಈ ಅಪರಾಧಿಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಶಾ ವಕೀಲಿ ವೃತ್ತಿ ಆರಂಭಿಸಿದ್ದ. ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೇ ಬಿಡುಗಡೆ ನಂತರದ ಬೆಳವಣಿಗೆಗಳ ಬಗ್ಗೆಯೂ ಕೋರ್ಟ್ ಗಮನಕ್ಕೆ ತರಲಾಗಿತ್ತು.