ಢಾಕಾ: ಬಾಂಗ್ಲಾದೇಶದ ಪ್ರಧಾನಿ ಮತ್ತು ಅವಾಮಿ ಲೀಗ್ ಮುಖ್ಯಸ್ಥರಾದ ಶೇಖ್ ಹಸೀನಾ ಅವರು 12ನೇ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷ, ಅವಾಮಿ ಲೀಗ್ ಮತ್ತು ಅದರ ಮಿತ್ರಪಕ್ಷಗಳು ಶೇಕಡ 50 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದ ನಂತರ ಐದನೇ ಅವಧಿಗೆ ಅಧಿಕಾರವನ್ನು ಪಡೆದಿದ್ದಾರೆ. ಚುನಾವಣೆಯನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿದ್ದವು.
ಒಟ್ಟು 300 ಸ್ಥಾನಗಳ ಪೈಕಿ ಘೋಷಿಸಲಾದ 264 ಸ್ಥಾನಗಳಲ್ಲಿ, ಹಸೀನಾ ಅವರ ಅವಾಮಿ ಲೀಗ್ 204 ಸ್ಥಾನಗಳಲ್ಲಿ ಮತ್ತು ಅವರ ಮಿತ್ರ ಪಕ್ಷವಾದ ಜಾತ್ಯ ಪಕ್ಷವು ಒಂಬತ್ತು ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.
ಹಸೀನಾ ಅವರು ಗೋಪಾಲಗಂಜ್-3 ಕ್ಷೇತ್ರದಿಂದ ಭಾನುವಾರ ಸಂಸತ್ತಿಗೆ ಮರು ಆಯ್ಕೆಯಾದರು. ಬಾಂಗ್ಲಾದೇಶದಲ್ಲಿ 12ನೇ ಸಾರ್ವತ್ರಿಕ ಚುನಾವಣೆಗೆ ಭಾನುವಾರ ಮತದಾನ ನಡೆಯಿತು.
ವಿರಳ ಹಿಂಸಾಚಾರ ಮತ್ತು ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ(ಬಿಎನ್‌ಪಿ) ಬಹಿಷ್ಕಾರದ ನಡುವೆ ಸಾರ್ವತ್ರಿಕ ಚುನಾವಣೆಯಲ್ಲಿ ಹಸೀನಾ 249,965 ಮತಗಳನ್ನು ಪಡೆದರು. ಅವರ ಸಮೀಪದ ಪ್ರತಿಸ್ಪರ್ಧಿ ಬಿಎನ್‌ಪಿಯಿಂದ ಎಂ. ನಿಜಾಮ್ ಉದ್ದೀನ್ ಲಷ್ಕರ್ 469 ಮತಗಳನ್ನು ಗಳಿಸಿದ್ದಾರೆ.
ಭಾನುವಾರದ ಚುನಾವಣೆಯಲ್ಲಿ 27 ರಾಜಕೀಯ ಪಕ್ಷಗಳ 1,500 ಅಭ್ಯರ್ಥಿಗಳು ಮತ್ತು 436 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದರು.