ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗೂಂಡಾ ಎಂದು ಸಾರ್ವಜನಿಕವಾಗಿ ಜರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ವಿಡಿಯೋ ವೈರಲ್ ಆದ ಬಳಿಕ ವ್ಯಕ್ತಿಯನ್ನು ಬಂಧಿಸಿ ಪೊಲೀಸರು ಥಳಿಸಿದ್ದಾರೆ.
ಆರೋಪಿಯನ್ನು ಮೊಹಮ್ಮದ್ ವಾಸಿಂ ಎಂದು ಗುರುತಿಸಲಾಗಿದ್ದು ಈತ ಗಾಜಿಯಾಬಾದ್‌ನ ಮಸ್ಸೂರಿ ನಿವಾಸಿ. ಸಾರ್ವಜನಿಕ ಸಂದರ್ಶನವೊಂದರಲ್ಲಿ ಆತ ಯೋಗಿ ಆದಿತ್ಯನಾಥ್ ಒಬ್ಬ ಗೂಂಡಾ. ನನ್ನ ವಿರುದ್ಧ ಕೇಸ್ ದಾಖಲಿಸಿದರೂ ನನಗೆ ಭಯವಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತಿಹಾಸ ಮತ್ತು ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಪರಿಶೀಲಿಸಿ ಎಂದು ಸಂದರ್ಶಕರೊಂದಿಗೆ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಗೂಂಡಾಗಿರಿಯನ್ನು ಕೊನೆಗಾಣಿಸಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ವ್ಯಕ್ತಿ ಈ ರೀತಿ ಉತ್ತರಿಸಿದ್ದರು.
“ನಾವು ಮುಸ್ಲಿಮರು ಅವರ 90ರ ತಲೆಮಾರುಗಳು ನಮ್ಮನ್ನು ತೊಡೆದುಹಾಕಲು ಸಾಧ್ಯವಿಲ್ಲ, ಯೋಗಿ ಆಕಾಶದಿಂದ ಇಳಿದು ಬಂದಿಲ್ಲ” ಎಂದು ವಾಗ್ದಾಳಿ ನಡೆಸಿದರು. ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಆರು ವರ್ಷ ಪೂರೈಸಿದ್ದು ಅವರ ಆಡಳಿತದ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಸ್ಲಿಂ ವ್ಯಕ್ತಿ, “ಹೌದು ಅವರು ಸಾಕಷ್ಟು ಕೆಲಸ ಮಾಡಿದ್ದಾರೆ, ಅವರು ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಮೇಲೆ ಕೆಲಸ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಮುಸ್ಲಿಂ ವ್ಯಕ್ತಿಯ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಮತ್ತೊಂದು ವಿಡಿಯೋದಲ್ಲಿ ಬಂಧನವಾಗಿರುವ ವ್ಯಕ್ತಿಯನ್ನ ಪೊಲೀಸರು ಥಳಿಸಿದ್ದು ಆತ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದು ಅವನನ್ನು ಪೊಲೀಸರು ಕರೆದೊಯ್ಯುವ ವಿಡಿಯೋ ಕೂಡ ವೈರಲ್ ಆಗಿದೆ. ಆರೋಪಿಯು ಪೊಲೀಸರ ವಶದಲ್ಲಿದ್ದು, ಮುಂದಿನ ಕ್ರಮ ಜರುಗಿಸಲಾಗುತ್ತಿದೆ.