ಬೆಂಗಳೂರು : ಅಯೋಧ್ಯೆಯಲ್ಲಿರುವ ರಾಮಮಂದಿರ ಉದ್ಘಾಟನೆಗೆ ಜ.22 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯಗೆ ಶಾಸಕ ಯಶ್‌ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಕೋಟ್ಯಾಂತರ ಭಾರತೀಯರ ಶತಮಾನಗಳ ಕನಸು ಜನವರಿ 22 ರಂದು ನನಸಾಗುತ್ತಿದೆ. ಹಿಂದೂಗಳ ಶ್ರದ್ಧಾ ಭಕ್ತಿ ಕೇಂದ್ರವಾದ ಆಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯೊಂದಿಗೆ ಭವ್ಯ ರಾಮ ಮಂದಿರವು ಉದ್ಘಾಟನೆಗೊಳ್ಳುತ್ತಿದೆ.
ಶ್ರೀರಾಮ ಮಂದಿರದ ಲೋಕಾರ್ಪಣೆಯು ಭಕ್ತರ ಭಾವನಾತ್ಮಕ ಮತ್ತು ಧಾರ್ಮಿಕತೆಯ ಐತಿಹಾಸಿಕ ಕ್ಷಣವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಈ ಪೂಜ್ಯ ದಿನವನ್ನು ದೇಶಾದ್ಯಂತ ದೇವಸ್ಥಾನ, ಮಂದಿರ, ಸಂಘ ಸಂಸ್ಥೆಗಳು ಮತ್ತು ಮನೆ ಮನೆಗಳಲ್ಲಿ ರಾಮ ಜ್ಯೋತಿ ಬೆಳಗಿಸುವುದರೊಂದಿಗೆ ವಿಶೇಷ ಪೂಜೆಗಳು, ಭಜನಾ ಸಂಕೀರ್ತನೆಗಳು ಹಾಗೂ ಅನ್ನ ಸಂತರ್ಪಣೆಗಳ ಮೂಲಕ ಅತ್ಯಂತ ಸಂಭ್ರಮ ಸಡಗರದಿಂದ ದೀಪಾವಳಿಯ ಹಬ್ಬದಂತೆ ಆಚರಿಸಲು ಕೋಟ್ಯಾಂತರ ಶ್ರೀರಾಮ ಭಕ್ತರು ಇಚ್ಛಿಸಿರುತ್ತಾರೆ.
ರಾಮ ಮಂದಿರದ ಲೋಕಾರ್ಪಣೆಯ ದಿನದದಂದು ಶ್ರೀರಾಮ ದೇವರ ಸೇವೆಯಲ್ಲಿ ಪಾಲ್ಗೊಂಡು ಮತ್ತು ದೇವರ ಕೃಪೆಗೆ ಪಾತ್ರರಾಗಲು ಆಯೋಧ್ಯೆ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನಾಂಕ : 22/01/2024 ರ ಸೋಮವಾರದಂದು ಶಾಲಾ ಕಾಲೇಜು, ಸರಕಾರಿ ಕಛೇರಿ ಹಾಗೂ ಬ್ಯಾಂಕ್ ಮತ್ತಿತರ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸುವಂತೆ ಈ ಮೂಲಕ ಕೋರುತ್ತೇನೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಸಿಎಂ ಸಿದ್ದರಾಮಯ್ಯ ಪತ್ರದ ಮೂಲಕ ಮನವಿ ಮಾಡಿದ್ದಾರೆ.