ಚೆನ್ನೈ : ಗುರುವಾರ (ಡಿಸೆಂಬರ್ 28) ನಿಧನರಾದ ನಟ ಮತ್ತು ದೇಸಿಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಮುಖ್ಯಸ್ಥ ವಿಜಯಕಾಂತ್ ಅವರ ನಿಧನಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ.
ರಜನಿಕಾಂತ್ ಶುಕ್ರವಾರ ಬೆಳಿಗ್ಗೆ ಚೆನ್ನೈಗೆ ಆಗಮಿಸಿ ವಿಜಯಕಾಂತ್ ಪಾರ್ಥಿವ ಶರೀರದ ಅಂತಿಮ ನಮನ ಸಲ್ಲಿಸಿದ್ದಾರೆ. ಚೆನ್ನೈನ ಅಣ್ಣಾ ಸಾಲೈನ ಐಲ್ಯಾಂಡ್ ಗ್ರೌಂಡ್ನಲ್ಲಿ ವಿಜಯಕಾಂತ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಅಂತಿಮ ನಮನ ಸಲ್ಲಿಸುವಾಗ ರಜನಿಕಾಂತ್ ಕಣ್ಣೀರು ಹಾಕುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಇದಕ್ಕೂ ಮುನ್ನ ರಜನಿಕಾಂತ್ ಅವರು ಟ್ಯುಟಿಕೋರಿನ್ ವಿಮಾನ ನಿಲ್ದಾಣದಿಂದ ಮಾಧ್ಯಮಗಳೊಂದಿಗೆ ಮಾತನಾಡಿದರು. ವಿಜಯಕಾಂತ್ ಅವರೊಂದಿಗಿನ ತಮ್ಮ ಕೊನೆಯ ಭೇಟಿಯನ್ನು ರಜನಿಕಾಂತ್ ನೆನಪಿಸಿಕೊಂಡರು. ನನ್ನ ಹೃದಯ ನೋಯುತ್ತಿದೆ. ವಿಜಯಕಾಂತ್ ಮಹಾನ್ ಇಚ್ಛಾಶಕ್ತಿಯ ವ್ಯಕ್ತಿ. ಡಿಎಂಡಿಕೆ ಸಾಮಾನ್ಯ ಸಭೆಯಲ್ಲಿ ನಾನು ಅವರನ್ನು ಕೊನೆಯದಾಗಿ ನೋಡಿದೆ ಮತ್ತು ಅವರು ಆಸ್ಪತ್ರೆಯಿಂದ ಆರೋಗ್ಯವಾಗಿ ಮರಳುತ್ತಾರೆ ಎಂದು ಭಾವಿಸಿದೆ. ಅವರ ಸಾವು ತಮಿಳುನಾಡಿನ ಜನತೆಗೆ ದೊಡ್ಡ ನಷ್ಟವಾಗಿದೆ. ತಮಿಳುನಾಡಿನ ಜನರು ಈಗ ಅವರನ್ನು ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹೇಳಿದ್ದಾರೆ.