ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಲು ತೀರ್ಮಾನಿಸಲಾಗಿದ್ದು, ಶೇ.60ರಷ್ಟು ಕನ್ನಡ ಭಾಷೆಯಲ್ಲಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕನ್ನಡ ನಾಮಫಲಕ ಕಡ್ಡಾಯ ವಿಚಾರವಾಗಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ಆಡಳಿತ ಭಾಷೆ. ಈ ವಿಚಾರದಲ್ಲಿ ರಾಜಿಯೇ ಇಲ್ಲ. ಎಲ್ಲಾ ಬೋರ್ಡ್ ಗಳಲ್ಲಿಯೂ ಕನ್ನಡ ಭಾಷೆ ಕಡ್ಡಾಯ. ಶೇ.60ರಷ್ಟು ಕನ್ನಡ, ಶೇ.40ರಷ್ಟು ಬೇರೆ ಭಾಷೆಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದರು.
ಈ ಹಿಂದೆ ಶೇ.50ರಷ್ಟು ಕನ್ನಡ, ಶೇ.50ರಷ್ಟು ಬೇರೆ ಭಾಷೆಗಳಿಗೆ ಅವಕಾಶವಿತ್ತು. ಆದರೆ ಈ ಹಿಂದಿನ ಸುತ್ತೋಲೆ ತಿದ್ದುಪಡಿ ಮಾಡಿ ನಿಯಮ ಜಾರಿಗೊಳಿಸಲಾಗುವುದು. ನಾಮಫಲಕಗಳು ಶೇ.60ರಷ್ಟು ಕನ್ನಡದಲ್ಲಿಯೆ ಇರಬೇಕು. ಇದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ. ನಿಯಮ ಉಲ್ಲಂಘನೆ ಆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.