ಬೆಂಗಳೂರು: 7ನೇ ರಾಜ್ಯವೇತನ ಆಯೋಗದ ಅವಧಿ ವಿಸ್ತರಣೆ ಮಾಡಿರುವುದನ್ನು ವಿರೋಧಿಸಿ ಮತ್ತು ತಕ್ಷಣ ವೇತನ ಪರಿಷ್ಕರಣಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಸಚಿವಾಲಯ ನೌಕರರು ಇಂದು ಪ್ರತಿಭಟನೆ ನಡೆಸಲಿದ್ದಾರೆ.
ಸಚಿವಾಲಯಗಳ ಎಲ್ಲಾ ನೌಕರರು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಿದ್ದು, ಮಧ್ಯಾಹ್ನ ಭೋಜನ ವಿರಾಮದ ವೇಳೆ ವಿಧಾನಸೌಧ ಆವರಣದ ಗಾಂಧೀಜಿ ಪ್ರತಿಮೆ ಎದುರು ಧರಣಿ ನಡೆಸಲಿದ್ದಾರೆ ಎಂದು ರಾಜ್ಯ ಸರ್ಕಾರಿ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ತಿಳಿಸಿದ್ದಾರೆ.
7ನೇ ವೇತನ ಆಯೋಗದ ಅವಧಿ ವಿಸ್ತರಿಸಿರುವುದನ್ನು ಹಿಂಪಡೆದು ಕೂಡಲೇ ವರದಿ ಸ್ವೀಕರಿಸಬೇಕು. ಶೇಕಡ 40ರಷ್ಟು ಹೆಚ್ಚಳದೊಂದಿಗೆ ವೇತನ ಪರಿಸ್ತರಣೆ ಮಾಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀತಿ ಜಾರಿಗೆ ತರಬೇಕು. ಎನ್‌ಪಿಎಸ್ ರದ್ದು ಮಾಡಿ ಕೂಡಲೇ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಆಡಳಿತ ಸುಧಾರಣಾ ಆಯೋಗದ ಅವೈಜ್ಞಾನಿಕ ಅಂಶಗಳ ವರದಿ ಹಿಂಪಡೆಯಬೇಕು. ಇಲಾಖೆಗಳ ಖಾಸಗೀಕರಣ, ವಿಲೀನ ಅಂಶಗಳನ್ನು ಜಾರಿ ಮಾಡಬಾರದು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಕೈಗೊಳ್ಳಲಾಗಿದೆ.