ಬೆಂಗಳೂರು : ಬೆಂಗಳೂರಲ್ಲಿ ಹಲವು ಇಂಗ್ಲಿಷ್ ನಾಮಫಲಕಗಳು ಉಡೀಸ್ ಆಗಿದ್ದು, ಕಡ್ಡಾಯವಾಗಿ ಕನ್ನಡದಲ್ಲೇ ಅಳವಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ 60% ಕನ್ನಡಕ್ಕೆ ಸರ್ಕಾರದ ಸೂಚನೆ ನೀಡಿದ್ದರೂ ಇಂದು ರಸ್ತೆಗಿಳಿದ ನೂರಾರು ಮಂದಿ ಕಾರ್ಯಕರ್ತರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ದೊಡ್ಡ ದೊಡ್ಡ ಜಾಹೀರಾತು ಫಲಕ ಏರಿ ಇಂಗ್ಲೀಷ್ ನಾಮಫಲಕಗಳನ್ನು ಹರಿದು ಹಾಕಿದ್ದಾರೆ. ಕೆಲವು ಕಡೆ ಕಲ್ಲು ತೂರಾಟ ಕೂಡ ನಡೆದಿದೆ.
ಪ್ರತಿಭಟನೆ ವೇಳೆ ಕರವೇ ಕಾರ್ಯಕರ್ತರು ಮಾಲ್ ಒಂದರ ಮುಂಭಾಗದ ಫ್ಲೈಓವರ್ ಮೇಲೆ ನಿಂತು ಮಾಲ್ ಕಡೆಗೆ ಚಪ್ಪಲಿ ತೂರಿದ್ದಾರೆ. ಹಲವು ಕಡೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಸಿದ್ದು, ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ. ಹಲವೆಡೆ ಇಂಗ್ಲೀಷ್ ಬೋರ್ಡ್ ಗಳಿರುವ ನಾಮಫಲಕಗಳಿಗೆ ಮಸಿ ಬಳಿದು, ಕನ್ನಡ ನಾಮಫಲಕ ಹಾಕುವಂತೆ ಎಚ್ಚರಿಕೆ ನೀಡಿದ್ದಾರೆ. ಏರ್ ಪೋರ್ಟ್ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್, ರಸ್ತೆ, ಯು.ಬಿ.ಸಿಟಿ ರಸ್ತೆ ಸೇರಿದಂತೆ ಹಲವು ಕಡೆ ಭಾರಿ ಪ್ರತಿಭಟನೆ ನಡೆದಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಯು.ಬಿ.ಸಿಟಿ ರಸ್ತೆಗಳಲ್ಲಿ ಕರವೇ ಕಾರ್ಯಕರ್ತರು, ಇಂಗ್ಲೀಷ್ ಬೋರ್ಡ್ ಗಳನ್ನು ಕಿತ್ತು ಪುಡಿ ಪುಡಿ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.