ಬೆಂಗಳೂರು: ಹೊಟ್ಟೆ ನೋವೆಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬ್ಯಾಂಕ್ ಉದ್ಯೋಗಿಯೊಬ್ಬ ಕೋಮಾ ಸ್ಥಿತಿಗೆ ತಲುಪಿದ್ದು, ವೈದ್ಯರ ನಿರ್ಲಕ್ಷದ ಬಗ್ಗೆ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಂಜಿತ್ (32) ಕೋಮಾ ಸ್ಥಿತಿಗೆ ತಲುಪಿರುವ ವ್ಯಕ್ತಿ. ಒಂದು ವರ್ಷದ ಹಿಂದೆ ಹೊಟ್ಟೆನೋವೆಂದು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ನೆಪ್ರೋ ಯುರಾಲಜಿಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ರಂಜಿತ್ ಏಕಾಏಕಿ ಕೋಮಾ ಸ್ಥಿತಿಗೆ ತಲುಪಿದ್ದು, ಒಂದು ವರ್ಷದಿಂದ ಯಾವುದೇ ಚೇತರಿಕೆ ಕಂಡುಬಂದಿಲ್ಲ.
ರಂಜಿತ್ ಕುಟುಂಬದವರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಿ.ವಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಸ್ಪತ್ರೆ ನಿರ್ದೇಶಕ ಡಾ.ಕೇಶವಮೂರ್ತಿ, ಶ್ರೀಧರ್, ಪ್ರದೀಪ್ ಹಾಗೂ ಕಿಶನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ದೂರು ನೀಡಿದ್ದಾರೆ.
2022ರ ಸೆ.15ರಂದು ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ರಂಜಿತ್ ಅವರನ್ನು ಚಿಕಿತ್ಸೆ ಬಳಿಕ ಸೆ.16ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಬಳಿಕ 2022ರ ಅಕ್ಟೋಬರ್ 12ರಂದು ಮತ್ತೆ ರಂಜಿತ್ ಆಸ್ಪತ್ರೆಗೆ ದಾಖಲಾಗಿದ್ದರು. ಅ.17ರಂದು ರಂಜಿತ್ ಗೆ ಸಣ್ಣ ಆಪರೇಷನ್ ಎಂದು ವೈದ್ಯರು ಆಪರೇಶನ್ ಮಾಡಿದ್ದರು. ಆದರೆ ಕುಟುಂಬದವರಿಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಸಣ್ಣ ಆಪರೇಶನ್ ಎಂದು ಇಡೀ ದಿನ ಆಪರೇಶನ್ ಮಾಡಿದ್ದಾರೆ. ಅದಾದ ಬಳಿಕ ರಂಜಿತ್ ಸಂಪೂರ್ಣ ಕೋಮಾಗೆ ಜಾರಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.