ಚಿಕ್ಕಮಗಳೂರು: ಕ್ರಿಸ್ ಮಸ್ ರಜೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ ಹೋಗಲು ನೀವು ಪ್ಲಾನ್ ಮಾಡಿದ್ದರೆ ಈ ಸುದ್ದಿ ಗಮನಿಸಲೇ ಬೇಕು. ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ದತ್ತ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಇಂದಿನಿಂದ ಡಿಸೆಂಬರ್ 27ರ ವರೆಗೆ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ದತ್ತಪೀಠದಲ್ಲಿ ಡಿಸೆಂಬರ್ 24, 25 ಹಾಗೂ 26ರಂದು ದತ್ತ ಜಯಂತಿ ನಡೆಯಲಿದ್ದು, ದತ್ತಪೀಠದಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆಯಲಿವೆ. ಡಿ.26ರಂದು ದತ್ತಪೀಠಕ್ಕೆ 20 ಸಾವಿರಕ್ಕೂ ಹೆಚ್ಚು ದತ್ತಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದೆ.
ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಚಿಕ್ಕಮಗಳೂರಿನ ಬಹುತೇಕ ಪ್ರವಾಸಿ ತಾಣಗಳು ಬಂದ್ ಆಗಲಿವೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಧಾರ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.