ತಮ್ಮ ರೋಡ್ ಶೋ ವೇಳೆ ಆಂಬುಲೆನ್ಸ್ ಗೆ ದಾರಿ ಮಾಡಿಕೊಡಲು ಪ್ರಧಾನಮಂತ್ರಿ ನರೇಂದ್ರಮೋದಿಯವರು ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದ ಘಟನೆ ಭಾನುವಾರ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಾರಣಾಸಿಯಲ್ಲಿ ರೋಡ್ ಶೋ ನಡೆಸುತ್ತಿದ್ದರು. ಈ ವೇಳೆ ಇದೇ ಮಾರ್ಗದಲ್ಲಿ ಬಂದ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡಲು ಪ್ರಧಾನಿ ಬೆಂಗಾವಲು ಪಡೆ ತನ್ನ ವೇಗವನ್ನು ಕಡಿಮೆ ಮಾಡಿ ಆಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿತು. ಒಮ್ಮೆ ಆಂಬ್ಯುಲೆನ್ಸ್ ಹಾದುಹೋದ ನಂತರ, ಬೆಂಗಾವಲು ಪಡೆ ಮತ್ತೆ ಪ್ರಯಾಣವನ್ನು ಮುಂದುವರಿಸಿತು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡಲು ಪ್ರಧಾನಿ ಮೋದಿ ಅವರ ಬೆಂಗಾವಲು ವಾಹನ ಗುಜರಾತ್ನಲ್ಲಿ ಕೆಲ ಸಮಯ ರೋಡ್ಶೋನಲ್ಲಿ ನಿಂತು ಸಾಗಿತು. ಅದೇ ರೀತಿ ನವೆಂಬರ್ 2022 ರಲ್ಲಿ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ರ್ಯಾಲಿಯಿಂದ ಹಿಂದಿರುಗಿದ ನಂತರ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡಲು ಪ್ರಧಾನಿ ಮೋದಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದರು.
ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಭಾನುವಾರ ವಾರಣಾಸಿಗೆ ಆಗಮಿಸಿದ್ದಾರೆ. ತಮ್ಮ ಭೇಟಿಯ ವೇಳೆ ಈ ಭಾಗದ ಅಭಿವೃದ್ಧಿಗೆ 19,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 37 ಯೋಜನೆಗಳಿಗೆ ಚಾಲನೆ ನೀಡುವರು.