
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಆದೇಶವನ್ನು ಸರ್ಕಾರ ಹಿಂಪಡೆದಿರುವ ನಿರ್ಧಾರ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ರಿಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಈ ರಿಟ್ ಅರ್ಜಿ ವಿಚಾರಣೆಗೆ ಯೋಗ್ಯವೇ ಎಂದು ಮೊದಲು ನಿರ್ಧರಿಸಿ ನಂತರ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಕಾನೂನು ಬದ್ಧತೆಯನ್ನು ತೀರ್ಮಾನಿಸೋಣ ಎಂದು ಹೇಳಿದೆ.
ಅಲ್ಲದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸದೇ ರಿಟ್ ಅರ್ಜಿಯನ್ನು ಯಾಕೆ ಸಲ್ಲಿಸಿದ್ದೀರಿ? ಎಂದು ಯತ್ನಾಳ್ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿದೆ. ಇದೇ ವೇಳೆ ರಾಜ್ಯ ಸರ್ಕಾರ ಅರ್ಜಿದಾರರ ಆಕ್ಷೇಪಕ್ಕೆ ಉತ್ತರಿಸುವಂತೆಯೂ ಸೂಚಿಸಿದೆ.
ಇದಕ್ಕೆ ಅಡ್ವಕೆಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಅರ್ಜಿಗೆ ಉತ್ತರಿಸಲು ಇನ್ನಷ್ಟು ಸಮಯಾವಕಾಶ ನೀಡಬೇಕು ಎಂದು ಕೇಳಿದರು. ಮನವಿ ಮಾನ್ಯ ಮಾಡಿದ ನ್ಯಾಯಪೀಠ, ರಿಟ್ ಅರ್ಜಿ ವಿಚಾರಣೆಯನ್ನು 2024ರ ಜನವರಿ 5ಕ್ಕೆ ಮುಂಡೂಡಿದೆ.