
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದ್ದು, ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ 15 ದಿನಗಳಲ್ಲಿ ಕೋಟಿ ಕೋಟಿ ಹಣ ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 15 ದಿನಗಳಲ್ಲಿ 7 ಜನರಿಗೆ ಬರೋಬ್ಬರಿ 3 ಕೋಟಿ ರೂಪಾಯಿ ವಂಚಿಸಲಾಗಿದ್ದು, ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೈಬರ್ ವಂಚಕರು ಗ್ರಾಹಕರಿಗೆ ನಿಮ್ಮ ಹೆಸರಲ್ಲಿ ಪಾರ್ಸಲ್ ಬಂದಿದೆ ಎಂದು ಹೇಳಿಕೊಂಡು ಕರೆ ಮಾಡಿ ನಿಮ್ಮ ಹೆಸರು ಡ್ರಗ್ಸ್ ವ್ಯವಹಾರದಲ್ಲಿ ದಾಖಲಾಗಿದೆ ಎಂದು ಭಯ ಹುಟ್ಟಿಸಿ ವಂಚಿಸುತ್ತಿದ್ದಾರೆ. ಸ್ಕೈಪ್ ಲಿಂಕ್ ನೀಡಿ ಲಾಗಿನ್ ಆಗುವಂತೆ ತಿಳಿಸುತ್ತಾರೆ. ಪೊಲೀಸ್ ಸಮವಸ್ತ್ರದಲ್ಲಿಯೇ ವಿಚಾರಣೆ ನಡೆಸುವವರಂತೆ ನಾಟಕವಾಡಿ, ವಿಚಾರಣೆಗೆ ಖುದ್ದು ಹಜರಾಗಬೇಕು. ವಿನಾಯಿತಿ ನೀಡಬೇಕೆಂದರೆ ಹಣ ನೀಡಬೇಕು ಎಂದು ಬೇಡಿಕೆ ಇಡುತ್ತಾರೆ. ಗಂಟೆಗಳ ಕಾಲ ಸ್ಕೈಪ್ ಬಿಟ್ಟು ಕದಲದಂತೆ ಮಾಡಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಬೆದರಿಸಿ ವಂಚಿಸುತ್ತಾರೆ.
ಇದೇ ರೀತಿ ಹೆಚ್ಎಸ್ ಆರ್ ಲೇಔಟ್ ನ ವೃದ್ಧ ದಂಪತಿಗೆ 1 ಕೋಟಿ 97 ಲಕ್ಷ ವಂಚಿಸಿದ್ದಾರೆ ಸೈಬರ್ ಕಳ್ಳರು. ಕಳೆದ 15 ದಿನಗಳಲ್ಲಿ 7 ಜನರು ಇದೇ ರೀತಿಯ ವಂಚನೆಗೆ ಒಳಗಾಗಿ 3 ಕೋಟಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರಿಗಾಗಿ ಶೋಧ ನಡೆಸಲಾಗಿದೆ.